ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಕರಾವಳಿ ಮತ್ತು ಮಲೆನಾಡಿನ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಇಂದು ಸೇರಿದಂತೆ ಐದು ದಿನ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹೈಅಲರ್ಟ್ ಮುಂದುವರೆಸಲಾಗಿದೆ. ಮೂರೂ ಜಿಲ್ಲೆಗಳಿಗೆ ನಾಳೆ ಮತ್ತು ನಾಡಿದ್ದು ರೆಡ್ ಅಲರ್ಟ್ ಹಾಗು ಇಂದು, ಜುಲೈ 16 ಮತ್ತು 17 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಗೆ ಇಂದು-ನಾಳೆ ಹಾಗೂ ಜುಲೈ 16 ಮತ್ತು 17 ರಂದು ಯೆಲ್ಲೋ ಹಾಗೂ ಜುಲೈ 15 ರಂದು ಆರೆಂಜ್ ಅಲರ್ಟ್ ಕೊಡಲಾಗಿದೆ. ಧಾರವಾಡ ಜಿಲ್ಲೆಗೆ ಜುಲೈ 15 ರಂದು ಆರೆಂಜ್, ಜುಲೈ 15, 17, 18 ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಿಗೆ ಇಂದು ಸೇರಿದಂತೆ ಮೂರು ದಿನ, ಹಾವೇರಿ ಜಿಲ್ಲೆಗೆ 14 ಮತ್ತು 15 ಮತ್ತು 17 ರಂದು, ವಿಜಯಪುರ ಜಿಲ್ಲೆಗೆ ಜುಲೈ 14 ಮತ್ತು 15, ಯಾದಗಿರಿ ಜಿಲ್ಲೆಗೆ 13 ಮತ್ತು 14, ರಾಯಚೂರು ಜಿಲ್ಲೆಗೆ 14 ಮತ್ತು ಬಾಗಲಕೋಟೆ ಜಿಲ್ಲೆಗೆ ಜುಲೈ 15 ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಉಳಿದಂತೆ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗೆ ನಾಳೆ ಮತ್ತು ನಾಡಿದ್ದು ರೆಡ್ ಅಲರ್ಟ್ ಹಾಗೂ ಜುಲೈ16, 17 ರಂದು ಆರೆಂಜ್ ಅಲರ್ಟ್ ಕೊಡಲಾಗಿದೆ. ಕೊಡಗು ಜಿಲ್ಲೆಗೆ ಐದು ದಿನ, ಹಾಸನ ಜಿಲ್ಲೆಗೆ ಜುಲೈ 14 ಮತ್ತು 15 ರಂದು ಆರೆಂಜ್, ಇಂದು ಮತ್ತು ಜುಲೈ 16 ಮತ್ತು 17 ಕ್ಕೆ ಯೆಲ್ಲೋ, ಮೈಸೂರು ಜಿಲ್ಲೆಗೆ 14, 15, 16 ರಂದು ಯೆಲ್ಲೋ, ಜುಲೈ 15 ಮತ್ತು 16 ರಂದು ದಾವಣಗೆರೆ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಳ್ಳಾರಿ, ಚಿತ್ರದುರ್ಗ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಜುಲೈ 15 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಲಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 40 ರಿಂದ 50 ಕಿಮೀ ತಲುಪುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ನಿರಂತರ ಗಾಳಿಯೊಂದಿಗೆ ಭಾರೀ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಗಾಳಿಯೂ ಇರಲಿದೆ. ದಕ್ಷಿಣ ಒಳನಾಡಿನ ಹಾಸನ ಮತ್ತು ಚಾಮರಾಜನಗರ ಜಿಲ್ಲೆಯಲ್ಲೂ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆ: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿ ಇರಲಿದೆ. ಗರಿಷ್ಠ 29 ಡಿಗ್ರಿ ಮತ್ತು ಕನಿಷ್ಠ 21 ಡಿಗ್ರಿ ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಅತಿ ಹೆಚ್ಚು ಮಳೆ?: ನಿನ್ನೆಯಿಂದ ಅತಿ ಹೆಚ್ಚು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕುಮಟಾ, ಕಡ್ತಾ, ಗೇರ್ಸೊಪ್ಪ, ಹೊನ್ನಾವರ ಒಬ್ಬಿ, ಉಡುಪಿ ಜಿಲ್ಲೆಯ ಕಾರ್ಕಳ, ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 13 ಸೆಂಟಿ ಮೀಟರ್ ಮಳೆ ಬಿದ್ದಿದೆ.
ಹವಾಮಾನ ಕೇಂದ್ರದ ನಿರ್ದೇಶಕರು ಹೇಳಿದ್ದು ಹೀಗೆ: ಮಾನ್ಸೂನ್ ಮಾರುತಗಳು ಉತ್ತರ ಗುಜರಾತ್ದಿಂದ ಉತ್ತರ ಕೇರಳದ ಉದ್ದಕ್ಕೂ ಸಮುದ್ರ ಮಟ್ಟದಲ್ಲಿ, ತೀರದ ಟ್ರೌಘ್ ಮಹಾರಾಷ್ಟ್ರ - ಉತ್ತರ ಕೇರಳ ಕರಾವಳಿಯಲ್ಲಿ ಸಾಗುತ್ತಿದೆ. ಈ ಕಾರಣಕ್ಕೆ ನೈಋತ್ಯ ಮಾನ್ಸೂನ್ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿದೆ. ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿದೆ. ಕರಾವಳಿ ಕರ್ನಾಟಕದ ಬಹುತೇಕ ಸ್ಥಳಗಳಲ್ಲಿ, ದಕ್ಷಿಣ ಒಳನಾಡಿನ ಹಲವು ಸ್ಥಳಗಳಲ್ಲಿ ಮತ್ತು ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆಯಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.