ಬೆಂಗಳೂರು: ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಫೆಬ್ರವರಿ 12ರಿಂದ (ಸೋಮವಾರ) ಆರಂಭವಾಗಲಿದ್ದು, ಆಡಳಿತ-ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಗುವುದು ನಿಶ್ಚಿತವಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ಕಾರಣ ಎರಡೂ ಕಡೆಗಳಿಂದ ಚರ್ಚೆಗೆ ಅಧಿವೇಶನ ಮತ್ತಷ್ಟು ಅನುಕೂಲ ಕಲ್ಪಿಸಿಕೊಡಲಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎದುರಿಸುತ್ತಿರುವ ತೀವ್ರ ಹಣಕಾಸಿನ ಸಂಕಷ್ಟವೇ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಪಾಲಿಗೆ ಪ್ರಮುಖ ಅಸ್ತ್ರವಾಗಲಿದ್ದು, ಅಭಿವೃದ್ಧಿ ಕುಂಠಿತದ ಬಗ್ಗೆ ಪ್ರಸ್ತಾಪಿಸಲು ಆತುರದಿಂದ ಕಾಯುತ್ತಿವೆ. ವಿಧಾನಸಭಾ ಕ್ಷೇತ್ರಗಳಿಗೆ ಸೂಕ್ತ ಪ್ರಮಾಣದ ಅನುದಾನ ದೊರೆಯದೆ ಇರುವುದು, ಕೃಷಿ, ಕೈಗಾರಿಕೆ ಹಾಗೂ ವಿವಿಧ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿರುವುದು ಸೇರಿ ಹಲವು ವಿಷಯಗಳನ್ನು ಅಸ್ತ್ರನ್ನಾಗಿಸಿ ಪರಿಣಾಮಕಾರಿಯಾಗಿ ಪ್ರಯೋಗಿಸಲು ಸಜ್ಜಾಗಿವೆ.
ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸುತ್ತಿದ್ದು, ದಿನದಿಂದ ದಿನಕ್ಕೆ ಜನ ಸಮಸ್ಯೆಗಳಿಗೆ ಸಿಲುಕುತ್ತಿದ್ದರೂ ಸರ್ಕಾರ ಸಮರ್ಪಕ ಪ್ರಮಾಣದ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬುದು ಪ್ರತಿಪಕ್ಷಗಳ ಆರೋಪ. ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ, ಜಾನುವಾರುಗಳ ಮೇವಿಗೆ ಕೊರತೆ ಎದುರಾಗುವ ಎಲ್ಲ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಆದರೆ, ಈ ವಿಷಯದಲ್ಲಿ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳು ಚೇತೋಹಾರಿಯಾಗಿಲ್ಲ. ಈಗಲೇ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಪರದಾಡುತ್ತಿದ್ದು, ಏಪ್ರಿಲ್, ಮೇ ತಿಂಗಳ ವೇಳೆಗೆ ಬಿಗಡಾಯಿಸಲಿರುವ ಬರದ ಹೊಡೆತವನ್ನು ಹೇಗೆ ಎದುರಿಸಲಿದೆ ಎಂಬುದು ಪ್ರತಿಪಕ್ಷಗಳ ಪ್ರಶ್ನೆಯಾಗಿದೆ.
ವಿದ್ಯುತ್ ಪರಿಸ್ಥಿತಿಯೂ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ರಾಜ್ಯದ ವಿದ್ಯುತ್ ಬೇಡಿಕೆ ಪ್ರಮಾಣ 16,000 ಮೆಗಾವ್ಯಾಟ್ಗಳಿಗಿಂತಲೂ ಹೆಚ್ಚಾಗಿದೆ. ಆದರೆ, ಉತ್ಪಾದನೆಯ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಸದ್ಯದ ಪರಿಸ್ಥಿತಿ ನೋಡಿದರೆ ಸರ್ಕಾರ ಜನರಿಗೆ ಕತ್ತಲೆ ಭಾಗ್ಯ ಕರುಣಿಸುವುದು ಗ್ಯಾರಂಟಿ. ಜನರಿಗೆ ಅಗತ್ಯವಾದ ಜೀವನಾವಶ್ಯಕ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಮಾರ್ಗೋಪಾಯಗಳೇ ಸರ್ಕಾರಕ್ಕೆ ಕಾಣಿಸದಂತಾಗಿದೆ. ಆ ಮೂಲಕ ಜನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂಬುದು ಕೂಡ ಪ್ರತಿಪಕ್ಷಗಳ ಆರೋಪವಾಗಿದೆ.
ಗ್ಯಾರಂಟಿ ಯೋಜನೆಗಳ ಬಗ್ಗೆ ಧ್ವನಿ: ಇದರ ನಡುವೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸರ್ಕಾರದ ಬೊಕ್ಕಸವನ್ನು ಬರಿದು ಮಾಡುತ್ತಿದೆ ಎಂಬುದೂ ಪ್ರತಿಪಕ್ಷಗಳ ಆರೋಪವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಹೇಗೆ ಜನರ ಪಾಲಿಗೆ ಹಿಂಸೆಯಾಗಿ ಪರಿಣಮಿಸಿದೆ. ತೆಂಗು, ಕೊಬ್ಬರಿ ಸೇರಿದಂತೆ ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ ಎಂಬ ದೂರುಗಳು ಇವೆ. ಈ ವಿಷಯಗಳ ಬಗ್ಗೆ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸನ್ನದ್ಧವಾಗಿವೆ.
ಪ್ರತಿಪಕ್ಷಗಳ ಅಸ್ತ್ರಗಳಿಗೆ ಆಡಳಿತ ಪಕ್ಷದ ಪ್ರತಿ ಅಸ್ತ್ರ: ಮತ್ತೊಂದೆಡೆ, ತನ್ನ ವಿರುದ್ಧ ಎರಗಿ ಬೀಳಲಿರುವ ಪ್ರತಿಪಕ್ಷಗಳ ಮೇಲೆ ಆಡಳಿತ ಪಕ್ಷವು ಪ್ರತಿ ಅಸ್ತ್ರ ಬಿಡಲು ಸಿದ್ಧತೆ ಮಾಡಿಕೊಂಡಿದೆ. ಕೇಂದ್ರ ಸರ್ಕಾರದಿಂದ ಸೂಕ್ತ ನೆರವು ದೊರೆಯದೆ ಇರುವುದು ಸೇರಿದಂತೆ ಹಲವು ವಿಷಯಗಳು ಪ್ರಮುಖವಾಗಿ ಬಿಜೆಪಿಯನ್ನು ತರಾಟೆ ತೆಗೆದುಕೊಳ್ಳಲು ಅನುಕೂಲವಾಗಲಿದೆ.
ರಾಜ್ಯದಿಂದ ವಿವಿಧ ತೆರಿಗೆಗಳ ಬಾಬ್ತಿನಲ್ಲಿ ಕೇಂದ್ರ ಸರ್ಕಾರ ವರ್ಷಂಪ್ರತಿ ನಾಲ್ಕು ಲಕ್ಷ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಸಂಗ್ರಹಿಸುತ್ತದೆ. ಆದರೆ, ಇಷ್ಟು ಹಣ ಪಡೆದರೂ ಕರ್ನಾಟಕಕ್ಕೆ ನೆಪ ಮಾತ್ರದ ಅನುದಾನ ಬಿಡುಗಡೆ ಮಾಡಿ ಕೈತೊಳೆದುಕೊಳ್ಳುತ್ತಿದೆ. ಬರಗಾಲ ಸೇರಿದಂತೆ ಕೇಂದ್ರದಿಂದ ಸೂಕ್ತ ಅನುದಾನ ಕೊಡಿ, ಬರಗಾಲದ ಪರಿಸ್ಥಿತಿಯನ್ನು ನಿಭಾಯಿಸಲು ಶಕ್ತಿ ನೀಡಿ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿಯವರು ಕೇಂದ್ರದ ಮೇಲೆ ಒತ್ತಡ ಹೇರಲಿ ಎಂಬುದು ಆಡಳಿತ ಪಕ್ಷಕ್ಕೆ ಇರುವ ಪ್ರಮುಖ ಅಸ್ತ್ರವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮುಂದೆ ರಾಜ್ಯದ ಬಿಜೆಪಿ ಸಂಸದರು ಕೋಲೆ ಬಸವನಿದ್ದಂತೆ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಬಿಜೆಪಿಯವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿವೇಶನದಲ್ಲೂ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿರುವ ಹಣದ ಪಾಲನ್ನು ರಾಜ್ಯಕ್ಕೆ ಬಿಡುಗಡೆ ಮಾಡಲು ಯತ್ನಿಸಿ ಎಂದು ತಿರುಗೇಟು ಕೊಡುವ ಸಾಧ್ಯತೆ ಇದೆ. ಒಟ್ಟಾರೆ, ಈ ಬಾರಿಯ ವಿಧಾನಮಂಡಲ ಅಧಿವೇಶನ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ಸಾಧ್ಯತೆಗಳು ಹೆಚ್ಚಿವೆ.
ಇದನ್ನೂ ಓದಿ: ಬಿಜೆಪಿ ತಂದಿದ್ದ 'ಭೂ ಸುಧಾರಣಾ ಕಾಯ್ದೆ 2020'ಕ್ಕೆ ತಿದ್ದುಪಡಿ: ಸಿಎಂ ಸಿದ್ದರಾಮಯ್ಯ