ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಮೊದಲ ಪೂರ್ಣಕಾಲಿಕ ಬಜೆಟ್ ಮಂಡಿಸುತ್ತಿದ್ದಾರೆ. ಮೊದಲ ಬಾರಿಗೆ ಸೂಟ್‌ಕೇಸ್ ಕೈಬಿಟ್ಟು ಲಿಡ್ಕರ್ ಸಂಸ್ಥೆಯ ಲೆದರ್ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ತರುವ ಮೂಲಕ ವಿನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಸಿದ್ದರಾಮಯ್ಯ ಅವರು ಈವರೆಗೆ 14 ಬಜೆಟ್‌ಗಳನ್ನು ಮಂಡನೆ ಮಾಡಿರುವ ಖ್ಯಾತಿಯನ್ನೂ ಅವರು ಗಳಿಸಿದ್ದಾರೆ.
ಕಾವೇರಿ ನಿವಾಸದಲ್ಲಿ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಬಜೆಟ್ ಪ್ರತಿ ಹಸ್ತಾಂತರಿಸಿದರು. ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ಗೆ ಅನುಮೋದನೆ ಪಡೆದುಕೊಂಡರು. ವಿಶೇಷ ಸಚಿವ ಸಂಪುಟ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ತಡವಾಗಿ ಬಂದರು. ಬಳಿಕ ಸದನಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯನವರು 15ನೇ 2024-25ನೇ ಸಾಲಿನ ಕರ್ನಾಟಕ ಬಜೆಟ್ ಭಾಷಣ ಆರಂಭಿಸಿದರು. ಸದನದೊಳಗೆ ಕಾಂಗ್ರೆಸ್ ಸದಸ್ಯರು ಶಲ್ಯ ಹಾಕ್ಕೊಂಡು ಬಂದು ಗಮನ ಸೆಳೆದರು.
'ರಾಜ್ಯ ಸರ್ಕಾರದ ಯೋಜನೆಗಳು ಕೇವಲ ಚುನಾವಣೆಯ ಗಿಮಿಕ್ ಅಲ್ಲ. ನಿಷ್ಪಕ್ಷಪಾತ, ಸಾಮಾಜಿಕ ನ್ಯಾಯಕ್ಕಾಗಿ ಸಂಪತ್ತನ್ನು ಎಲ್ಲೆಡೆ ಹಂಚಲು ಕೈಕೊಂಡ ಯೋಜನೆಗಳು ಆಗಿವೆ. ಕೆಳವರ್ಗದವರು ಮೇಲೆ ಬರಲು ಅವಕಾಶ ಮಾಡಿಕೊಡಲು ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೂ ಕನಿಷ್ಠ 50 ಸಾವಿರ ರೂಪಾಯಿ ಕೊಡಲಾಗುತ್ತಿದೆ. ಈ ಯೋಜನೆಗಳ ಜಾರಿಯಿಂದ ದೇಶದಲ್ಲಿ ಕರ್ನಾಟಕ ರಾಜ್ಯವು ಮೆಚ್ಚುಗೆ ಗಳಿಸಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳು ನಮ್ಮ ಸರ್ಕಾರದ ಯೋಜನೆಗಳಿಗೆ ಹೊಗಳಿವೆ'' ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣದ ಆರಂಭದಲ್ಲಿ ಹೇಳಿದರು.
''ರಾಜ್ಯದಲ್ಲಿ ಬೊಕ್ಕಸದಲ್ಲಿ ಹಣವಿಲ್ಲ ಎಂದು ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಸುಳ್ಳು ಸುದ್ದಿಗಳನ್ನು ಹರಡಿಸುತ್ತಿವೆ. ಆದರೆ, ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಹೆಚ್ಚಳವಾಗಿದೆ'' ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಈ ನಡುವೆ ರಾಜ್ಯ ಸರ್ಕಾರ 2024-25 ಸಾಲಿನಲ್ಲಿ ಒಟ್ಟು 1,05,246 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಸಿಎಂ ಸಿದ್ದರಾಮಯ್ಯ 2024-25 ಸಾಲಿನಲ್ಲಿ ರಾಜಸ್ವ ಕೊರತೆಯ ಬಜೆಟ್ ಮಂಡನೆ ಮಾಡಿದ್ದಾರೆ. ಅಂದಾಜು 27,354 ಕೋಟಿ ರೂ. ಆದಾಯ ಕೊರತೆಯ ಬಜೆಟ್ ಇದಾಗಿದೆ.
ರಾಜ್ಯದಲ್ಲಿ ಈ ಬಾರಿ ಶೇ 18ರಷ್ಟು ಜಿಎಸ್ಟಿ ಸಂಗ್ರಹ ಹೆಚ್ಚಳವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಿಂದಿನ ಸರ್ಕಾರದ ವೈಫಲ್ಯದಿಂದ ರಾಜ್ಯಕ್ಕೆ 59,274 ಕೋಟಿ ಜಿಎಸ್ಟಿ ನಷ್ಟ ಉಂಟಾಗಿದೆ ಎಂದು ಆರೋಪಿಸಿದರು. ಸೆಸ್ ಸರ್ಚಾರ್ಜ್ ಹೆಚ್ಚಿಸಿದರೂ ರಾಜ್ಯಕ್ಕೆ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: 2024-25 ನೇ ಸಾಲಿನಲ್ಲಿ ಶೇಕಡಾ 6.6 ರಷ್ಟು ರಾಜ್ಯದ ಬೆಳವಣಿಗೆ ದರ ಗುರಿ