ಮಂಗಳೂರು: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಮಂಗಳೂರಿನ ಗೆಳತಿಯರಿಬ್ಬರ ಸಾಧನೆ ಬೆರಗು ಮೂಡಿಸಿದೆ. ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ತುಳಸಿ ಮತ್ತು ಸಮೃದ್ಧಿ ಪರೀಕ್ಷೆಯಲ್ಲಿ ಟಾಪ್ 10ರೊಳಗೆ ಸ್ಥಾನ ಪಡೆದಿದ್ದಾರೆ. ತುಳಸಿ 596 ಅಂಕ ಪಡೆದು ಎರಡನೇ ಸ್ಥಾನ ಪಡೆದರೆ, ಸಮೃದ್ದಿ 594 ಅಂಕ ಪಡೆದು ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಎಸ್ಎಸ್ಎಲ್ಸಿಯಲ್ಲೂ ಸಾಧಕರಿವರು: ತುಳಸಿ ಮತ್ತು ಸಮೃದ್ಧಿ ಕೆನರಾ ಸಂಸ್ಥೆಯಲ್ಲಿ ಎಂಟನೇ ತರಗತಿಯಿಂದ ಒಟ್ಟಿಗೆ ಓದುತ್ತಿದ್ದು, ಬೆಸ್ಟ್‌ಫ್ರೆಂಡ್ಸ್ ಆಗಿದ್ದಾರೆ. ಕಲಿಕೆಯಲ್ಲಿ ಸದಾ ಮುಂದಿರುವ ಇವರು ಎಸ್ಎಸ್ಎಲ್ಸಿಯಲ್ಲಿ 624 ಅಂಕ ಗಳಿಸಿ ಎರಡನೇ ರ‍್ಯಾಂಕ್ ಪಡೆದಿದ್ದರು.
ಟ್ಯೂಷನ್ಗೆ ಹೋಗದೆ ಕಲಿಕೆ: ಇಬ್ಬರೂ ಈವರೆಗೆ ಯಾವುದೇ ಟ್ಯೂಷನ್ ಪಡೆದುಕೊಂಡಿಲ್ಲ. ಶಾಲೆಯಲ್ಲಿ ಸಿಕ್ಕ ಶಿಕ್ಷಣದಿಂದಲೇ ಈ ಸಾಧನೆ ಮಾಡಿದ್ದಾರೆ.
ಸಿಎ ಆಗುವ ಗುರಿ: ಇಬ್ಬರು ಗೆಳತಿಯರು ಕೂಡಾ ಸಿಎ ಆಗುವ ಗುರಿ ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ತುಳಸಿ, "ತುಂಬಾ ಖುಷಿಯಾಗಿದೆ. ಎರಡನೇ ರ‍್ಯಾಂಕ್ ನಿರೀಕ್ಷೆ ಮಾಡಿರಲಿಲ್ಲ. ಹಾರ್ಡ್ವರ್ಕ್ ಮಾಡಿದ್ದೇನೆ. ಪ್ರತೀ ದಿನ ಓದುತ್ತಿದ್ದೆ. ಕೊನೆ ಕ್ಷಣಕ್ಕೆ ಕಾಯದೇ ನಿರಂತರ ಓದುತ್ತಿದ್ದೆ. ಹೆತ್ತವರು ಸಂಪೂರ್ಣ ಬೆಂಬಲ ನೀಡಿದ್ದರು. ಯಾವುದೇ ಒತ್ತಡ ಹೇರದೆ ಸಪೋರ್ಟ್ ಮಾಡಿದ್ದರು. ಸಮೃದ್ಧಿ ಸಾಧನೆಯೂ ನನಗೆ ಖುಷಿ ತಂದಿದೆ" ಎಂದರು.
ಸಮೃದ್ಧಿ ಮಾತನಾಡಿ, "ಹಾರ್ಡ್ ವರ್ಕ್ ಮಾಡಿದ್ದಕ್ಕೆ ದೇವರು ಪ್ರತಿಫಲ ಕೊಟ್ಟಿದ್ದಾರೆ. ಅಪ್ಪ ಅಮ್ಮ, ದೊಡ್ಡಪ್ಪ, ದೊಡ್ಡಮ್ಮ ತುಂಬಾ ಸಪೋರ್ಟ್ ಮಾಡಿದರು. ಓದಲು ಬೇಕಾದದ್ದನ್ನು ತಂದು ಕೊಟ್ಟಿದ್ದಾರೆ. ತುಳಸಿಗೆ ಒಳ್ಳೆಯ ಮಾರ್ಕ್ ಸಿಗುತ್ತೆ ಅಂತ ನಿರೀಕ್ಷೆ ಇತ್ತು. ಅವಳ ಸಾಧನೆ ಖುಷಿ ತಂದಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ಇವರೇ ನೋಡಿ ಟಾಪರ್ಸ್; ಹೀಗಿದೆ ಡಿಟೇಲ್ಸ್ - 2nd PUC Toppers