ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಕರಡಿಗೆ ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಸ್ತಾವಿತ ವಿಧೇಯಕದಲ್ಲಿ ಆಡಳಿತ ವಿಭಾಗದಲ್ಲಿ ಸ್ಥಳೀಯರಿಗೆ ಶೇಕಡಾ 50ರಷ್ಟು ಮತ್ತು ಇತರ ವಿಭಾಗದಲ್ಲಿ ಶೇಕಡಾ 75ರಷ್ಟು ಸ್ಥಾನಗಳನ್ನು ಮೀಸಲಿಡಬೇಕು ಎಂದು ಹೇಳಿದೆ. ಸರ್ಕಾರದ ಈ ನಿರ್ಧಾರಕ್ಕೆ ಉದ್ಯಮಿಗಳು, ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಸ್ತಾವಿತ ಮೀಸಲಾತಿ ವಿಧೇಯಕದಲ್ಲಿರುವ ಅಂಶಗಳೇನು?
- ಪ್ರಸ್ತಾವಿತ ವಿಧೇಯಕದ 'ಸ್ಥಳೀಯ ಅಭ್ಯರ್ಥಿ' ಎಂದರೆ ಕರ್ನಾಟಕದಲ್ಲಿ ಹುಟ್ಟಿ, 15 ವರ್ಷಗಳ ಕಾಲ ಇಲ್ಲಿಯೇ ನೆಲೆಸಿರುವ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ, ಓದುವ ಮತ್ತು ಬರೆಯುವ ಸಾಮರ್ಥ್ಯ ಹೊಂದಿರುವ ವ್ಯಕ್ತಿ ಎಂದು ವ್ಯಾಖ್ಯಾನಿಸುತ್ತದೆ.
- ಪ್ರಸ್ತಾವಿತ ವಿಧೇಯಕವು, "ಯಾವುದೇ ಉದ್ಯಮ, ಕಾರ್ಖಾನೆ ಅಥವಾ ಇತರ ಕ್ಷೇತ್ರಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಶೇಕಡಾ 50ರಷ್ಟು ಆಡಳಿತ ವಿಭಾಗಗಳಲ್ಲಿ ಮತ್ತು ಶೇಕಡಾ 70ರಷ್ಟು ಆಡಳಿತವಲ್ಲದ ವಿಭಾಗಗಳಲ್ಲಿ ನೇಮಿಸಿಕೊಳ್ಳಬೇಕು. ಮಾಧ್ಯಮಿಕ ಶಾಲಾ ಹಂತದಲ್ಲಿ ಕನ್ನಡವನ್ನು ಭಾಷೆಯಾಗಿ ಕಲಿತಿರಬೇಕು. ಈ ಪ್ರಮಾಣಪತ್ರ ಹೊಂದಿರದ ಅಭ್ಯರ್ಥಿಗಳು 'ನೋಡಲ್ ಏಜೆನ್ಸಿ' ನಿಗದಿ ಮಾಡಿದ ಕನ್ನಡ ಪ್ರಾವೀಣ್ಯತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಕೈಗಾರಿಕೆಗಳು ಮತ್ತು ಸಂಸ್ಥೆಗಳಿಗೆ ನೇಮಕವಾಗಲು ಅರ್ಹ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಸರ್ಕಾರದ ಸಹಯೋಗದೊಂದಿಗೆ ಮೂರು ವರ್ಷಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ತರಬೇತಿ ನೀಡಬೇಕು.
- ಅರ್ಹ ಸ್ಥಳೀಯ ಅಭ್ಯರ್ಥಿಗಳು ಸಿಗದೇ ಹೋದ ಸಂದರ್ಭದಲ್ಲಿ ಸರ್ಕಾರಕ್ಕೆ ಮೀಸಲಾತಿ ಸಡಿಲಿಕೆ ಅರ್ಜಿಯನ್ನು ಸಲ್ಲಿಸಬೇಕು. ಈ ವಿನಾಯಿತಿಯು ಆಡಳಿತ ವಿಭಾಗದಲ್ಲಿ ಶೇಕಡಾ 25ಕ್ಕಿಂತ, ಇತರ ವಿಭಾಗಗಳಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಇರಬಾರದು ಎಂಬುದನ್ನು ಪ್ರಸ್ತಾವಿತ ವಿಧೇಯಕದಲ್ಲಿ ಕಡ್ಡಾಯ ಮಾಡಿದೆ.
- ಈ ಕಾಯಿದೆಯಡಿ ನೋಡಲ್ ಏಜೆನ್ಸಿಯನ್ನು ಸಹ ಸ್ಥಾಪಿಸಲಾಗುವುದು. ಇದು ಕೈಗಾರಿಕೆಗಳಲ್ಲಿ ಉದ್ಯೋಗದಲ್ಲಿರುವ ಸ್ಥಳೀಯರ ಮೇಲೆ ನಿಗಾ ವಹಿಸುತ್ತದೆ. ಸರ್ಕಾರಕ್ಕೆ ಕಾಲಕಾಲಕ್ಕೆ ವರದಿಯನ್ನೂ ಸಲ್ಲಿಸಲಿದೆ.
ಸ್ಥಳೀಯ ಎಂದರೆ ಯಾರು?: ಸ್ಥಳೀಯ ಅಭ್ಯರ್ಥಿ ಎಂದರೆ, ವಿಧೇಯಕದ ಕರಡಿನಲ್ಲಿ ಉಲ್ಲೇಖಿಸಿರುವಂತೆ, ಕರ್ನಾಟಕದಲ್ಲಿ ಹುಟ್ಟಿ 15 ವರ್ಷಗಳಿಂದ ವಾಸಿಸಿದ್ದ ವ್ಯಕ್ತಿಯಾಗಿರಬೇಕು. ಆತನಿಗೆ ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಸ್ಪಷ್ಟವಾಗಿ ಮಾತನಾಡಲು ಬರಬೇಕು. ಮಾಧ್ಯಮಿಕ ಅಂದರೆ, 8ರಿಂದ 10ನೇ ತರಗತಿಯಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿರಬೇಕು. ಇಲ್ಲವಾದಲ್ಲಿ, ನೋಡಲ್ ಏಜೆನ್ಸಿ ನಡೆಸುವ ಕನ್ನಡ ಪ್ರಾವೀಣ್ಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕು.
ಬಹುಕಾಲದ ಬೇಡಿಕೆಗೆ ಸಿಕ್ಕ ಮನ್ನಣೆ: ಕನ್ನಡಿಗರಿಗೆ ಖಾಸಗಿ ವಲಯದ ಉದ್ಯೋಗಳಲ್ಲಿ ಶೇಕಡಾ 100ರಷ್ಟು ಉದ್ಯೋಗ ಮೀಸಲಾತಿ ನೀಡಬೇಕು ಎಂಬುದು ಬಹು ಹಿಂದಿನ ಬೇಡಿಕೆಯಾಗಿದೆ. ಅದನ್ನು ಕಾಂಗ್ರೆಸ್ ಸರ್ಕಾರ ಈಗ ಅಂಗೀಕರಿಸಿದೆ. ಈ ಕುರಿತು ಕನ್ನಡಪರ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿದ್ದವು. ಎಚ್ಚೆತ್ತುಕೊಂಡ ಸರ್ಕಾರ ನಿರ್ಧಾರ ಪ್ರಕಟಿಸಿದೆ.
ಇಂಥದ್ದೊಂದು ಮೀಸಲಾತಿ ನೀಡಿ ಎಂಬ ಧ್ವನಿ ಕೇಳಿಬಂದಿದ್ದು 1984ರಲ್ಲಿ. ಮಾಜಿ ಕೇಂದ್ರ ಸಚಿವೆ ಮತ್ತು ಕರ್ನಾಟಕದ ಮೊದಲ ಮಹಿಳಾ ಸಂಸದೆ ಸರೋಜಿಸಿ ಮಹಿಷಿ ಅವರು ಅಂದು ಈ ಬಗ್ಗೆ ವರದಿ ಸಲ್ಲಿಸಿದ್ದರು. ಅವರ ನೇತೃತ್ವದ ಸಮಿತಿಯು ವರದಿಯಲ್ಲಿ 58 ಶಿಫಾರಸುಗಳನ್ನು ಮಾಡಿತ್ತು. ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದಲ್ಲಿ ಸಿ ಮತ್ತು ಡಿ ಗ್ರೂಪ್ ಹುದ್ದೆಗಳಲ್ಲಿ ಸ್ಥಳೀಯರಿಗೆ ಶೇಕಡಾ 100ರಷ್ಟು ಮೀಸಲಾತಿ ನೀಡಬೇಕು ಎಂದು ಸೂಚಿಸಲಾಗಿತ್ತು.
ಪ್ರಸ್ತಾವಿತ ವಿಧೇಯಕದ ಕರಡಿಗೆ ಹಲವು ಉದ್ಯಮಿಗಳಿಂದ ಆಕ್ಷೇಪ: ಕಾಂಗ್ರೆಸ್ ಸರ್ಕಾರದ ಈ ಪ್ರಸ್ತಾವಿತ ವಿಧೇಯಕಕ್ಕೆ ಹಲವು ಉದ್ಯಮಿಗಳು ಮತ್ತು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಯೋಕಾನ್‌ನ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಶಾ ಅವರು, ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ಮೇಲೆ ಈ ನೀತಿಯು ಪರಿಣಾಮ ಬೀರಲಿದೆ. ಹೀಗಾಗಿ ಈ ನಿರ್ಧಾರದಲ್ಲಿ ಕೆಲ ಬದಲಾವಣೆ ತರಬೇಕು ಎಂದು ಸಲಹೆ ನೀಡಿದ್ದಾರೆ.
ತಾಂತ್ರಿಕ ಹುದ್ದೆಗಳಿಗೆ ಅರ್ಹ ವ್ಯಕ್ತಿಯ ಅಗತ್ಯವಿರುತ್ತದೆ. ಸ್ಥಳೀಯರಿಗೆ ಉದ್ಯೋಗ ನೀಡುವುದು ಮೊದಲ ಗುರಿಯಾಗಬೇಕಿದ್ದರೂ, ಕೆಲ ತಾಂತ್ರಿಕ ಸ್ಥಾನಗಳಿಗೆ ಈ ನಿಯಮ ಅನ್ವಯಿಸುವುದು ಕಷ್ಟ. ಅಂತಹ ಸ್ಥಾನಗಳಿಗೆ ಹೆಚ್ಚಿನ ವಿನಾಯಿತಿ ನೀಡಬೇಕು ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡು ಸಚಿವ ಪ್ರಿಯಾಂಕ್ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿದ್ದಾರೆ.
ಇನ್ಫೋಸಿಸ್‌ನ ಮಾಜಿ ಕಾರ್ಯನಿರ್ವಾಹಕ (ಸಿಇಒ) ಮೋಹನ್‌ದಾಸ್ ಪೈ ಕೂಡ ವಿಧೇಯಕವನ್ನು ಟೀಕಿಸಿ, ವಾಪಸ್ಗೆ ಆಗ್ರಹಿಸಿದ್ದಾರೆ. "ಈ ಪ್ರಸ್ತಾವಿತ ವಿಧೇಯಕವನ್ನು ಬುಟ್ಟಿಗೆ ಹಾಕಬೇಕು. ಇದು ತಾರತಮ್ಯ, ಪ್ರತಿಗಾಮಿ ಮತ್ತು ಸಂವಿಧಾನ ವಿರೋಧಿಯಾಗಿದೆ‘‘ ಎಂದು ಹೇಳಿದ್ದಾರೆ
ಮೀಸಲಾತಿ ಬಗ್ಗೆ ಇರುವ ಅಪಸ್ವರಗಳೇನು?
- ಇಂತಹ ಪ್ರಸ್ತಾವಿತ ವಿಧೇಯಕ ಸಂವಿಧಾನದ ವಿಧಿ 19(1)(ಡಿ) ಮತ್ತು (ಇ) ಖಾತರಿಪಡಿಸಿದಂತೆ, ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡುವ ಮೂಲಭೂತ ಹಕ್ಕನ್ನು ಇದು ಕಸಿದಂತಾಗುತ್ತದೆ ಎಂಬ ಮಾತಿದೆ.
- ಕಾರ್ಮಿಕರು ಬೇಡಿಕೆ, ಅವಶ್ಯಕತೆಗೆ ಅನುಗುಣವಾಗಿ ವಲಸೆ ಹೋಗುತ್ತಾರೆ. ಕಂಪನಿಗಳು ವಾಸಸ್ಥಾನ ಲೆಕ್ಕಿಸದೇ, ಪ್ರತಿಭೆಗೆ ಪರಿಗಣಿಸಿ ನೇಮಿಸಿಕೊಳ್ಳುತ್ತವೆ. ಇದಕ್ಕೆ ಹಿನ್ನಡೆ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.
- ಕೈಗಾರೀಕರಣಗೊಂಡಿರುವ ಹರಿಯಾಣ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಿಗೆ ಜನರು ಹೆಚ್ಚು ವಲಸೆ ಹೋಗುತ್ತಾರೆ, ಇದಕ್ಕೂ ಹಿನ್ನಡೆಯಾಗಲಿದೆ.
- ಪ್ರಪಂಚದ ಯಶಸ್ವಿ ಆರ್ಥಿಕ ರಾಷ್ಟ್ರಗಳು ಇದನ್ನು ವಿರೋಧಿಸುತ್ತವೆ.
- ಈ ನೀತಿ ಖಾಸಗಿ ವಲಯದ ಮೇಲೆ ನಿಯಂತ್ರಣ ಸಾಧಿಸುತ್ತದೆ.
- ಅಂತಹ ರಾಜ್ಯದಲ್ಲಿ ಹೂಡಿಕೆ ಮತ್ತು ಅಭಿವೃದ್ಧಿ ಕುಂಠಿತವಾಗಲಿದೆ. ಖಾಸಗಿ ವಲಯಕ್ಕೆ ಅನುಕೂಲ ಮಾಡಿಕೊಡುವ ರಾಜ್ಯಗಳಿಗೆ ಕಂಪನಿಗಳು ಎತ್ತಂಗಡಿಯಾಗಲಿವೆ.
- ಇಂತಹ ನಿಯಮಗಳು ಸಂವಿಧಾನದ 19(1)(ಜಿ) ಅಡಿಯಲ್ಲಿ ಬರುವ ವ್ಯಾಪಾರ ಮತ್ತು ವ್ಯವಹಾರದ ಹಕ್ಕನ್ನು ನಿರ್ಬಂಧಿಸುತ್ತದೆ. ಹುದ್ದೆಗೆ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಲುವ ಖಾಸಗಿ ಮಾಲೀಕರ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಕಸಿಯುತ್ತದೆ.
ಮೂಲ: RKC