ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಏರತೊಡಗಿದೆ. ಹವಾಮಾನ ವೈಪರಿತ್ಯದಿಂದಾಗಿ ವಾಡಿಕೆಗಿಂತ ಮುನ್ನವೇ ಬಿಸಿಲಿನ ಕಾವು ಹೆಚ್ಚಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಉಷ್ಣಾಂಶ ಹೆಚ್ಚಳ ಹಾಗೂ ಗಾಳಿಯಲ್ಲಿ ತೇವಾಂಶ ಕಡಿಮೆ ಆಗಿರುವ ಹಿನ್ನೆಲೆ ಜನರಿಗೆ ಹಗಲು ಮತ್ತು ರಾತ್ರಿಯ ವೇಳೆ ಸಹ ಸೆಖೆಯ ಅನುಭವವಾಗುತ್ತಿದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮತ್ತು ಕಲಬರಗಿ, ವಿಜಯಪುರ, ರಾಯಚೂರು, ಕೊಪ್ಪಳ, ಬಾಗಲಕೋಟೆ, ದಾವಣಗೆರೆ, ಗದಗ, ಬಳ್ಳಾರಿ, ಧಾರವಾಡ, ಹಾವೇರಿ, ಚಿತ್ರದುರ್ಗ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 1 ರಿಂದ 2 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು, ಹಾಸನದಲ್ಲಿಯೂ ವಾಡಿಕೆಗಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್ ಅಧಿಕ ಉಷ್ಣಾಂಶ ವರದಿಯಾಗಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರಾಸರಿಗಿಂತ ಹೆಚ್ಚು ತಾಪಮಾನ ದಾಖಲಾಗಲಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಏಪ್ರಿಲ್‌ನ ಮೊದಲ ಎರಡೂ ವಾರ ಬಿಸಿಲಿನ ಝಳ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಬಿಸಿಲು ಮತ್ತು ಒಣಹವೆ ಮತ್ತಷ್ಟು ತೀವ್ರಗೊಳ್ಳಲಿದೆ. ಅದಾದ ನಂತರ 2 ರಿಂದ 3 ವಾರಗಳ ಬಳಿಕ ಪೂರ್ವ ಮುಂಗಾರು ಉತ್ತಮವಾಗಲಿದೆ. ಏಪ್ರಿಲ್ 3ನೇ ವಾರದ ಬಳಿಕ ಪರಿಸ್ಥಿತಿ ತಹಬದಿಗೆ ಬರಲಿದೆ. ಪೂರ್ವ ಮುಂಗಾರು ಮಳೆ ರಾಜ್ಯದ ಪಾಲಿಗೆ ವರದಾನವಾಗಲಿದೆ. ಉಷ್ಣಾಂಶದ ಏರಿಕೆಯಿಂದ ಮಳೆಯ ಪ್ರಮಾಣವೂ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಇಲಾಖೆ ತಿಳಿಸಿದರು.
ಮಾರ್ಚ್ ನಲ್ಲಿ ಮಳೆಯ ಪ್ರಮಾಣ ಕಡಿಮೆಯಿದೆ. ಏಪ್ರಿಲ್ ತಿಂಗಳ ಎರಡನೆಯ ವಾರದಲ್ಲಿ ಹೆಚ್ಚು ಮಳೆ ಸುರಿಯಲಿದೆ. ಕೆಲ ಜಿಲ್ಲೆಗಳಲ್ಲಿ ಈಗಾಗಲೇ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಕೂಡ ಅಧಿಕ ತಾಪಮಾನ ದಾಖಲಾಗಲಿದೆ. ಉಷ್ಣಾಂಶ ಹೆಚ್ಚಿದಂತೆ ಹೆಚ್ಚು ಮಳೆ ಬರುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿ ಎ. ಪ್ರಸಾದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಿಡಿಲು ಸಹಿತ ಧಾರಾಕಾರ ಮಳೆ- ವಿಡಿಯೋ - Rain in Dakshina Kannada