ದಾವಣಗೆರೆ: ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮತ್ತೊಂದು ಗರಿ ಮೂಡಿದೆ. ಖನಿಜ ಬ್ಲಾಕ್‌ಗಳ ಹರಾಜು ಹಾಗೂ ನಿರ್ವಹಣೆಯಲ್ಲಿ ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಇತ್ತೀಚಿಗೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್ನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರ ಸಮ್ಮೇಳನ ನಡೆಯಿತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ರಾಜ್ಯಕ್ಕೆ ಬಂದಿರುವ ಪ್ರಶಸ್ತಿ ಸ್ವೀಕರಿಸಿದರು.
ಇದರ ಜೊತೆಗೆ ಮರಳು ನೀತಿ ಹಾಗೂ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ನಿರ್ವಹಿಸಿದ ನೀತಿ ದೇಶಕ್ಕೆ ಮಾದರಿಯಾಗಿದ್ದು, ಕೇಂದ್ರ ಖನಿಜ ಇಲಾಖೆ ಸಚಿವ ಪ್ರಲ್ಹಾದ್ ಜ್ಯೋಶಿ ಹಾಗೂ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ರಾಜ್ಯಕ್ಕೆ ಇತ್ತೀಚಿಗೆ ದೊರೆತ ಸ್ಕ್ವಾಚ್ ರಾಷ್ಟ್ರೀಯ ಪ್ರಶಸ್ತಿ: ದೇಶದ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತನ್ನ ಸಿಬ್ಬಂದಿಗಾಗಿ ಜಾರಿ ಮಾಡಿದ ವಿನೂತನ 1 ಕೋಟಿ ರೂ. ಸಾರಿಗೆ ಸುರಕ್ಷಾ ವಿಮಾ ಯೋಜನೆಗಾಗಿ ಕೆಎಸ್ಆರ್ಟಿಸಿಗೆ ಇತ್ತೀಚೆಗೆ ಪ್ರತಿಷ್ಠಿತ ಸ್ಕ್ವಾಚ್ ರಾಷ್ಟ್ರೀಯ ಪ್ರಶಸ್ತಿ- 2023ರ ಲಭಿಸಿತ್ತು.
ನವದೆಹಲಿಯ ಕಾನ್ಸಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಸ್ಕ್ವಾಚ್ ಇಂಡಿಯಾದಿಂದ ಇತ್ತೀಚೆಗೆ ಆಯೋಜಿಸಿದ್ದ 95ನೇ ಸ್ಕ್ವಾಚ್ ಸಮ್ಮಿತ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಕ್ವಾಚ್ ಗ್ರೂಪ್ ಅಧ್ಯಕ್ಷ ಸಮೀರ್ ಕೊಚ್ಚರ್, ಕೆಎಸ್ಆರ್ಟಿಸಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ತಾಂತ್ರಿಕ ಶಿಲ್ಪಿ ಎನ್.ಕೆ. ಬಸವರಾಜು, ಮೈಸೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ ನಿಗಮದ ಪರವಾಗಿ ಪ್ರಶಸ್ತಿ ಸ್ವೀಕಾರ ಮಾಡಿದ್ದರು.
ಸಾರಿಗೆ ಸುರಕ್ಷಾ ವಿಮಾ ಯೋಜನೆ ಅಡಿ ಈವರೆಗೆ ಕೆಎಸ್ಆರ್ಟಿಸಿಯಿಂದ ತನ್ನ 9 ಸಿಬ್ಬಂದಿಯ ಕುಟುಂಬಸ್ಥರಿಗೆ ತಲಾ 1 ಕೋಟಿ ರೂಪಾಯಿಯನ್ನು ಅಪಘಾತ ವಿಮಾ ಪರಿಹಾರದ ಚೆಕ್ ವಿತರಣೆ ಮಾಡಿದೆ. ದೆಹಲಿಯ ಸ್ಕ್ವಾಚ್ ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು 1997ರಲ್ಲಿ ಸ್ಥಾಪಿಸಲಾಗಿದೆ. ಈ ಸಂಸ್ಥೆಯ ವತಿಯಿಂದ 2003ರಿಂದ ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕತೆ ಅಳವಡಿಕೆ ಮತ್ತು ಆಂತರಿಕ ಬೆಳವಣಿಗೆಗಾಗಿ ಸ್ಕ್ವಾಚ್ ಪ್ರಶಸ್ತಿ ನೀಡುತ್ತಾ ಬಂದಿದೆ. ಸಂಸ್ಥೆಗಳು ಮಾಡಿರುವ ಉತ್ತಮ ಸಾಧನೆ ಮತ್ತು ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಪರಿಗಣಿಸಿ ಅತ್ಯುನ್ನತ ಪ್ರಶಸ್ತಿಗಳನ್ನು ನೀಡುತ್ತದೆ.
ಇದನ್ನೂ ಓದಿ: ಕಾರು ರೇಸಿಂಗ್ ಸ್ಪರ್ಧೆಯಲ್ಲಿ 16 ವರ್ಷದ ಬಾಲಕಿಯ ಅದ್ಭುತ ಸಾಧನೆ.. ಹಲವು ಪ್ರಶಸ್ತಿಗಳ ಗರಿ