ಬೆಂಗಳೂರು: ರಣಜಿ ಟ್ರೋಫಿ 2024 ಸೀಸನ್ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಅಗರ್ತಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತ್ರಿಪುರಾ ವಿರುದ್ಧದ ಪಂದ್ಯದ ಬಳಿಕ ಫೆಬ್ರವರಿ 2ರಂದು ರೈಲ್ವೇಸ್ ವಿರುದ್ಧ ಕರ್ನಾಟಕ ತನ್ನ ಮುಂದಿನ ಪಂದ್ಯವನ್ನ ಸೂರತ್ನಲ್ಲಿ ಆಡಬೇಕಿದೆ. ಆದ್ದರಿಂದ ಕರ್ನಾಟಕ ರಣಜಿ ತಂಡದ ಆಟಗಾರರು ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ವಿಮಾನದಲ್ಲಿ ತಮ್ಮ ಆಸನದ ಮುಂಭಾಗದಲ್ಲಿದ್ದ ನೀರನ್ನ ಕುಡಿದ ತಕ್ಷಣ ಮಯಾಂಕ್ ಅಸ್ವಸ್ಥಗೊಂಡಿದ್ದಾರೆ. ಗಂಟಲು ಹಾಗೂ ಬಾಯಿ ಸುಟ್ಟ ಅನುಭವದಂತಾಗಿ ಮಾತನಾಡಲು ಸಾಧ್ಯವಾಗದಂತಾಗಿದ್ದರಿಂದ ತಕ್ಷಣ ಅವರನ್ನ ಅಗರ್ತಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಾಗಬೇಕಿದೆ. ತ್ರಿಪುರ ಕ್ರಿಕೆಟ್ ಸಂಸ್ಥೆ ಹಾಗೂ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ. ಮಯಾಂಕ್ ಅಗರ್ವಾಲ್ ಆರೋಗ್ಯ ಸ್ಥಿರವಾಗಿದ್ದು, ನಾಳೆ ಅವರನ್ನ ಬೆಂಗಳೂರಿಗೆ ಕರೆತರಲಾಗುತ್ತದೆ. ಉಳಿದಂತೆ ಇತರ ಆಟಗಾರರು ಸೂರತ್ಗೆ ಪ್ರಯಾಣಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲಗಳು ಸ್ಪಷ್ಟಪಡಿಸಿವೆ.
ವಿಮಾನದಲ್ಲಿ ಅಗರ್ವಾಲ್ಗೆ ವಾಂತಿ ಆದ ಬಳಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ತ್ರಿಪುರಾ ಕ್ರಿಕೆಟ್ ಅಸೋಶಿಯೇಷನ್ ಸಿಬ್ಬಂದಿ ಆಗಮಿಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಎರಡು ಶತಕ, ಒಂದು ಅರ್ಧ ಶತಕ ಬಾರಿಸಿ ಉತ್ತಮ ಫಾರ್ಮ್ನಲ್ಲಿರುವ ಬಲಗೈ ಆಟಗಾರ ಮುಂದಿನ ಪಂದ್ಯದಲ್ಲಿ ಕಣಕ್ಕೆ ಇಳಿಯುವುದು ಅನುಮಾನ ಎನ್ನಲಾಗುತ್ತಿದೆ. ಕೆಲ ವೈದ್ಯಕೀಯ ಟೆಸ್ಟ್ ಬಳಿಕ ಮುಂದಿನ ಪಂದ್ಯಕ್ಕೆ ಕ್ಯಾಪ್ಟನ್ ಲಭ್ಯತೆ ನಿರ್ಧಾರವಾಗಲಿದೆ.
ಕರ್ನಾಟಕ ತಂಡಕ್ಕೆ ದೇಶಿ ಟೂರ್ನಿಯಲ್ಲಿ ಮಯಾಂಕ್ ಪ್ರಮುಖ ಆಟಗಾರನಾಗಿದ್ದಾರೆ. ಸದ್ಯದ ಟೂರ್ನಿಯಲ್ಲಿ ಮಯಾಂಕ್ ಪಡೆ ಎರಡು ಪಂದ್ಯದಲ್ಲಿ ಗೆದ್ದಿದೆ. ಇನ್ನು ತಲಾ ಒಂದು ಪಂದ್ಯದಲ್ಲಿ ಡ್ರಾ ಮತ್ತು ಸೋಲನುಭವಿಸಿದೆ. ಮುಂದಿನ ಪಂದ್ಯಕ್ಕೆ ಮಯಾಂಕ್ ಅಲಭ್ಯರಾದರೆ ಉಪ ನಾಯಕ ನಿಕಿನ್ ಜೋಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಇದನ್ನೂ ಓದಿ: ಪುತ್ತೂರು ಬಳಿ ನಿರ್ಮಾಣವಾಗಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ: ಕೆಎಸ್ಸಿಎಗೆ ಜಾಗದ ದಾಖಲೆ ಹಸ್ತಾಂತರ