ಬೆಳಗಾವಿ: ಮುಂದಿನ ಯಾವುದೇ ಹೋರಾಟದಲ್ಲೂ ನಮ್ಮನ್ನು ಬಂಧಿಸಿ ಜೈಲಿಗೆ ಹಾಕಿದರೆ ಇಡೀ ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ನಾರಾಯಣ ಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
"ನಾಡಿಗಾಗಿ ಮನೆ ಬಿಟ್ಟು ಹೊರಬಂದು ಹೋರಾಟ ಮಾಡುವವರು ನಾವು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಯಡಿಯೂರಪ್ಪನವರೇ ರಾಜ್ಯಕ್ಕೆ ನಿಮ್ಮ ಕೊಡುಗೆ ಏನಾದರೂ ಇದೆಯೇ?. ರಾಜಕಾರಣಿಗಳ ಕೊಡುಗೆಗಳ ಬಗ್ಗೆ ಪ್ರಶ್ನಿಸಿದಾಗ ಬರುವ ಉತ್ತರ ಶೂನ್ಯ" ಎಂದು ಟೀಕಿಸಿದರು.
"ಬೆಳಗಾವಿ ನಮ್ಮದು ಅಂತಾ ಹೇಳುವ ಪದ್ಧತಿ ಕರವೇ ಹೋರಾಟದಿಂದ ಶುರುವಾಗಿದೆ. ಕರ್ನಾಟಕದ ಸಚಿವ ಸಂಪುಟ ಅಂದರೆ ನಮ್ಮ ಕನ್ನಡಿಗರು. ಅಪ್ಪಟ ಕನ್ನಡಿಗರು ಈ ಸಭೆಯಲ್ಲಿ ಕುಳಿತಿರುತ್ತಾರೆ. ಪಾಟೀಲ ಪುಟ್ಟಪ್ಪ, ಕುವೆಂಪು ನಮ್ಮ ನಾಯಕರು, ದೇವರು. ನಮಗೆ ಕನ್ನಡವೇ ಧರ್ಮ, ಕನ್ನಡವೇ ಜಾತಿ" ಎಂದರು. "ಎಂಇಎಸ್ನವರಿಗೆ ಮಹಾರಾಷ್ಟ್ರದಲ್ಲಿ ಸಣ್ಣ ಕಾರ್ಪೊರೇಟರ್ ಕೂಡ ಆಗಲು ಆಗಲ್ಲ. ನೀವು ಮೊದಲು ಕನ್ನಡ ಮಾತಾಡಿ" ಎಂದು ಗರಂ ಆದರು.
"ಇಲ್ಲಿನ ರಾಜಕಾರಣಿಗಳು ಕೋಟಿ ಕೋಟಿ ಮೌಲ್ಯದ ಆಸ್ತಿ ಮಾಡಿಕೊಂಡಿದ್ದಾರೆ. ಅವರಿಗೆ ನೀವು ಸಾಹುಕಾರ, ಸಾಹುಕಾರ ಎಂದು ಕರೆದು ಇಲ್ಲೇ ಇದ್ದೀರಿ. ಅದೇ ಸಾಹುಕಾರ ಏನೆಲ್ಲಾ ಮಾಡಿಕೊಂಡು ಕುಳಿತಿದ್ದಾರೆ ನೋಡಿ. ಕಳಸಾ ಬಂಡೂರಿ ವಿಚಾರದಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು. ಆದರೆ, ಏನಾಯಿತು? ಒಂದು ಜೆಸಿಬಿ ಕೆಲಸ ಮಾಡಲಿಲ್ಲ. ಇದರ ಬಗ್ಗೆ ಪ್ರಶ್ನಿಸಬೇಕು. ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಇಲ್ಲಿನ ರಾಜಕಾರಣಿಗಳು ತಮ್ಮ ಮನೆಯವರನ್ನು ಶಾಸಕ, ಸಂಸದರನ್ನಾಗಿ ಮಾಡುತ್ತಿದ್ದಾರಷ್ಟೇ" ಎಂದು ನಾರಾಯಣ ಗೌಡ ಹರಿಹಾಯ್ದರು.
ಕಾರ್ಯಕ್ರಮದಲ್ಲಿ ಸಣ್ಣಿರಪ್ಪಾ, ಪುಟ್ಟೆಗೌಡ್ರು, ದಾ.ಪಿ.ಆಂಜನಪ್ಪ, ಹೇಮಲತಾ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಸುರೇಶ್ ಗವನ್ನವರ, ಸಹನಾ ಶೇಖರ, ಗೋಮೂರ್ತಿ ಯಾದವ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕರವೇ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: 'ನಿಜವಾದ ಬಿಜೆಪಿ ಕಾರ್ಯಕರ್ತ ಈ ರೀತಿ ಮಾಡಲ್ಲ': 'ಗೋ ಬ್ಯಾಕ್' ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ಗರಂ