ಬೆಂಗಳೂರು: ಇದೇ 27ರಂದು ರಾಜ್ಯಾದ್ಯಂತ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ (ಕೆಎಎಸ್) ನಡೆಯುವ ಪೂರ್ವಭಾವಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಇತರೆ ಯಾವುದೇ ಆಭರಣಗಳಿಗೆ ನಿಷೇಧ ಸೇರಿದಂತೆ, ಕಡ್ಡಾಯವಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಬಿಡುಗಡೆ ಮಾಡಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಪರೀಕ್ಷೆಗೆ 8 ಗಂಟೆಗೂ ಮುನ್ನ ಮತ್ತು ಮಧ್ಯಾಹ್ನ 2 ಗಂಟೆಯ ಪರೀಕ್ಷೆಗೆ 12ಕ್ಕೂ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಹಾಜರಾಗುವ ಪ್ರತಿಯೊಬ್ಬರೂ ಪರೀಕ್ಷಾ ಕೇಂದ್ರದಲ್ಲಿ ತಪಾಸಣೆಗೆ ಒಳಗಾಗುವುದು ಕಡ್ಡಾಯ. ಪರೀಕ್ಷೆ ಮಧ್ಯೆ ಶೌಚಾಲಯಕ್ಕೆ ಹೋಗುವವರು ಮತ್ತೆ ತಪಾಸಣೆಗೆ ಒಳಗಾಗಲೇಬೇಕು. ಧಾರ್ಮಿಕ ಆಚರಣೆಗೆ ಸಂಬಂಧಿಸಿದ ವಿಶೇಷ ವಸ್ತು ಅಥವಾ ವಸ್ತ್ರಗಳನ್ನು ಧರಿಸಿರುವವರು ವಿಶೇಷ ತಪಾಸಣೆಗೆ ಒಳಗಾಗಬೇಕು ಎಂದು ಕೆಪಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.
ವಸ್ತ್ರ ಸಂಹಿತೆ: ತುಂಬು ತೋಳಿನ ಶರ್ಟ್ ಅಥವಾ ಟಿ-ಶರ್ಟ್, ಹಲವು ಪದರುಗಳಿರುವ ವಿವಿಧ ವಿನ್ಯಾಸದ ವಸ್ತ್ರಗಳನ್ನು ಧರಿಸುವಂತಿಲ್ಲ. ಸರಳ ಉಡುಪು ಹಾಗೂ ಚಪ್ಪಲಿ ಧರಿಸಿರಬೇಕು. ಮಂಗಳ ಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಆಭರಣ ಹಾಕಿಕೊಳ್ಳುವಂತಿಲ್ಲ.
ಶೂ ಮತ್ತು ಸಾಕ್ಸ್‌ಗೆ ನಿಷೇಧ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಬ್ಯಾಗ್ ಅಥವಾ ಫೋನ್ ಇನ್ನಿತರ ವೈಯಕ್ತಿಕ ವಸ್ತುಗಳನ್ನು ಭದ್ರವಾಗಿ ಇರಿಸಲು ಯಾವುದೇ ವ್ಯವಸ್ಥೆ ಇರುವುದಿಲ್ಲ ಎಂದು ಕೆಪಿಎಸ್‌ಸಿ ಸೂಚಿಸಿದೆ.
ನಿಯಮಗಳು ಎಲ್ಲಾ ಅಭ್ಯರ್ಥಿಗಳು ಮತ್ತು ಅಂಧ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿರುವ ಲಿಪಿಕಾರರಿಗೂ ಅನ್ವಯವಾಗಲಿದೆ ಎಂದು ಕೆಪಿಎಸ್‌ಸಿ ಹೇಳಿದೆ.