ಬೆಂಗಳೂರು: ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಬಿಬಿಎಂಪಿ ಮಟ್ಟದ ನಾಲ್ಕು ಸಮಿತಿಗಳನ್ನು ರಚಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಮಿತಿಗಳನ್ನು ರಚಿಸುವುದಾಗಿ ಘೋಷಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರನ್ನು ಸಮಿತಿ ಅಧ್ಯಕ್ಷರು, ಸದಸ್ಯರನ್ನಾಗಿ ಮಾಡಲು ನಿರ್ಧರಿಸಲಾಗಿತ್ತು. ಇದೀಗ ಸರ್ಕಾರ ಸಮಿತಿಗಳ ರಚಿಸುವ ಸಂಬಂಧ ರೂಪುರೇಷೆ, ಹೊಣೆಗಾರಿಕೆಗಳ ಬಗ್ಗೆ ಆದೇಶ ಮಾಡಿದೆ.
ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪಾಧಿಕಾರ, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಬಿಬಿಎಂಪಿ ಮಟ್ಟದಲ್ಲಿ ಬಿಬಿಎಂಪಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಲಾಗುತ್ತಿದೆ.
ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ: ಒಬ್ಬ ಅಧ್ಯಕ್ಷ, ಐವರು ಉಪಾಧ್ಯಕ್ಷರು ಹಾಗೂ 31 ಜಿಲ್ಲೆಗಳನ್ನು ಪ್ರತಿನಿಧಿಸುವ ಪ್ರತಿ ಜಿಲ್ಲೆಗೆ ಒಬ್ಬರಂತೆ 31 ಮಂದಿ ಸದಸ್ಯರನ್ನು ಪ್ರಾಧಿಕಾರಕ್ಕೆ ನೇಮಕ ಮಾಡುವಂತೆ ಸೂಚಿಸಲಾಗಿದೆ. ಪ್ರಾಧಿಕಾರದ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಹಾಗೂ 5 ಮಂದಿ ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶಿಷ್ಟಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಲಿದ್ದಾರೆ.
ರಾಜ್ಯದ ಜಿಲ್ಲೆಗಳನ್ನು 5 ವಿಭಾಗಗಳನ್ನಾಗಿ ವಿಂಗಡಿಸಿ, ರಾಜ್ಯ ಮಟ್ಟದ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರುಗಳಿಗೆ ಪ್ರತಿಯೊಂದು ವಿಭಾಗಗಳ ಜವಾಬ್ದಾರಿ ಹಂಚಿಕೆ ಮಾಡಿ ಸದಸ್ಯ ಕಾರ್ಯದರ್ಶಿ ಆದೇಶ ಹೊರಡಿಸಬೇಕು. ಸದಸ್ಯ ಕಾರ್ಯದರ್ಶಿಯವರು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಇತರೆ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯನ್ನು ರಾಜ್ಯ ಮಟ್ಟದ ಅನುಷ್ಠಾನ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಬೇಕು.
ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಸದಸ್ಯ ಕಾರ್ಯದರ್ಶಿ ಸಕ್ಷಮ ಪ್ರಾಧಿಕಾರದ (ಸರ್ಕಾರದ) ಅನುಮೋದನೆ ಪಡೆದು ನೇಮಿಸಬೇಕು. ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಮುಖ ಜವಾಬ್ದಾರಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಯಾಗಿರುತ್ತದೆ. ಪ್ರಾಧಿಕಾರವು ನೀತಿ ರಚನೆ, ಸುಧಾರಣಾ ಕ್ರಮಗಳು, ಅನುಷ್ಠಾನದಲ್ಲಿ ಸರಳೀಕರಣ ಹಾಗೂ ಸಮನ್ವಯತೆ ತರುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ: ಜಿಲ್ಲಾ ಮಟ್ಟದ ಪ್ರಾಧಿಕಾರಕ್ಕೆ ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಒಬ್ಬ ಸದಸ್ಯರು ಅಧ್ಯಕ್ಷರಾಗಿರಲಿದ್ದಾರೆ. 5 ಮಂದಿ ಉಪಾಧ್ಯಕ್ಷರು, 15 ಸದಸ್ಯರು ಹಾಗೂ ಆಯಾ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವು ನೇಮಕ ಮಾಡಬೇಕು. ಆಯಾ ಜಿಲ್ಲೆಗಳ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಜಿಲ್ಲಾ ಮಟ್ಟದ ಪ್ರಾಧಿಕಾರ ಆಯಾ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ತಳಮಟ್ಟದಲ್ಲಿ ಸಮನ್ವಯತೆ, ಯೋಜನೆಯ ಬಗ್ಗೆ ಮಾಹಿತಿಯನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಮೂಲಕ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು.
ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ: ತಾಲೂಕು ಮಟ್ಟದ ಸಮಿತಿಗೆ ಜಿಲ್ಲಾ ಮಟ್ಟದ ಅನುಷ್ಠಾನ ಪ್ರಾಧಿಕಾರದ ಒಬ್ಬ ಸದಸ್ಯರು ಅಧ್ಯಕ್ಷರಾಗಲಿದ್ದಾರೆ. 14 ಸದಸ್ಯರು, ಕಾರ್ಯನಿರ್ವಹಣಾಧಿಕಾರಿಗಳು (ಇಒ) ಸದಸ್ಯ ಕಾರ್ಯದರ್ಶಿಯಾಗಲಿದ್ದಾರೆ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ನೇಮಕ ಮಾಡಬೇಕು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಆಯಾ ತಾಲ್ಲೂಕಿನ ನಗರ ಸ್ಥಳೀಯ ಸಂಸ್ಥೆಗಳು/ಹೋಬಳಿ/ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 'ಗ್ಯಾರಂಟಿ ಸಮಾವೇಶ' ಆಯೋಜಿಸುವುದು ಈ ಸಮಿತಿಯ ಪ್ರಮುಖ ಜವಾಬ್ದಾರಿಯಾಗಿರಲಿದೆ. ಹೋಬಳಿ ಮಟ್ಟದ ಶಿಬಿರಗಳಿಗೆ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು.
ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯು ಗ್ಯಾರಂಟಿ ಯೋಜನೆಗಳ ಫಲಾನುಭವಿ ನೋಂದಣಿ ಶಿಬಿರಗಳನ್ನು ಆಯೋಜಿಸಲು ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ, ಅಗತ್ಯ ನೆರವು ನೀಡಬೇಕು. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯು ಅಗತ್ಯ ಸಿಬ್ಬಂದಿ, ಇನ್ನಿತರೆ ಸೂಕ್ತ ವ್ಯವಸ್ಥೆಗಳನ್ನು ಮಾಡಿ, ಶಿಬಿರಗಳ ಸುಗಮ ಆಯೋಜನೆಗೆ ಅಗತ್ಯ ಕ್ರಮವಹಿಸಬೇಕು.
ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ (28 ವಿಧಾನಸಭಾ ಕ್ಷೇತ್ರ): ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಒಬ್ಬ ಸದಸ್ಯರು ಇದರ ಅಧ್ಯಕ್ಷರಾಗಿರಲಿದ್ದಾರೆ. 28 ಮಂದಿ (ವಿಧಾನಸಭಾ ಕ್ಷೇತ್ರಗಳಿಂದ ಆಯ್ಕೆ ಸದಸ್ಯರು) ಸದಸ್ಯರಾಗಿರಲಿದ್ದಾರೆ. ಬಿಬಿಎಂಪಿ ವಿಶೇಷ ಆಯುಕ್ತರು (ಆಡಳಿತ) ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ. ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಮತ್ತು ಸದಸ್ಯರನ್ನು ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ನೇಮಕ ಮಾಡಲಿದೆ.
ಇದನ್ನೂ ಓದಿ: ಪಕ್ಷದ ತತ್ವ, ಸಿದ್ಧಾಂತ, ಗ್ಯಾರಂಟಿ ಯೋಜನೆಗಳ ಬಗ್ಗೆ ಗೌರವ ಇರುವವರು ಇರುತ್ತಾರೆ: ಸಚಿವ ಹೆಚ್.ಕೆ.ಪಾಟೀಲ್