ಬೆಂಗಳೂರು: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣ ಹಾಗೂ ಶಾಸಕರು ನೀಡಿದ ದೂರುಗಳ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಒಪ್ಪಿಸಿದೆ.
ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ವಿನಯ್ ಕುಲಕರ್ಣಿ ಹಾಗೂ ಅವರ ಆಪ್ತ ಸಹಾಯಕ ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮಹಿಳೆಯ ದೂರಿನಲ್ಲಿ ಏನಿದೆ?: 2022ರಲ್ಲಿ ತಾವು ಶಾಸಕ ವಿನಯ್ ಕುಲಕರ್ಣಿ ಅವರನ್ನ ಭೇಟಿ ಮಾಡಿದ್ದು, ಆ ಬಳಿಕ ರೈತರೊಬ್ಬರಿಂದ ಅವರು ನನ್ನ ಫೋನ್ ನಂಬರ್ ಪಡೆದಿದ್ದರು. ನಂತರದಲ್ಲಿ ರಾತ್ರಿ ವೇಳೆಯೂ ನನಗೆ ಕರೆ ಮಾಡಲು ಪ್ರಾರಂಭಿಸಿದ್ದರು. ಕೆಲವು ತಿಂಗಳ ನಂತರ, ಬೆತ್ತಲೆಯಾಗಿದ್ದಾಗ ವಿಡಿಯೋ ಕರೆ ಮಾಡುವಂತೆ, ಹೆಬ್ಬಾಳದಲ್ಲಿರುವ ತಮ್ಮ ಮನೆಗೆ ಬರುವಂತೆ ಒತ್ತಾಯಿಸಿದ್ದರು. ಬಳಿಕ ಬೆಳಗಾವಿಗೆ ಕರೆದಿದ್ದು, ಅಲ್ಲಿ ನನ್ನನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದರು ಎಂದು ಮಹಿಳೆ ದೂರಿದ್ದರು.
ಅಲ್ಲದೇ, ಬೆಂಗಳೂರಿಗೆ ಹೋಗಿದ್ದಾಗ ಕರೆ ಮಾಡಿ ಹೆಬ್ಬಾಳದ ಮನೆಗೆ ಬರುವಂತೆ ಸೂಚಿಸಿದ್ದರು. ಬಳಿಕ ಕಾರಿನಲ್ಲಿ ಒಬ್ಬರೇ ಬಂದು, ವಿಮಾನ ನಿಲ್ದಾಣ ಬಳಿಯ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲೇ ಅತ್ಯಾಚಾರ ಎಸಗಿದ್ದಾರೆ. ರಾಜಕೀಯದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಸುತ್ತೇನೆ ಎಂದು ಆಮಿಷವೊಡ್ಡಿದ್ದರು. ನಂತರ ಪುನಃ ಭೇಟಿ ಮಾಡಿದ್ದಾಗ ನನ್ನ ಫೋನ್ ತೆಗೆದುಕೊಂಡು ಅವರ ಪಕ್ಷದ ಸದಸ್ಯನೊಬ್ಬನ ಕೈಗೆ ಇರಿಸಿ ಫೋಟೋ ಹಾಗೂ ವಿಡಿಯೋ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಅಕ್ಟೋಬರ್ 2ರಂದು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಶಾಸಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಯಾರಿಗೂ ವಿಚಾರ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದರು.
ವಿನಯ್ ಕುಲಕರ್ಣಿ ದೂರು: ಇದಕ್ಕೆ ಪ್ರತಿಯಾಗಿ, ಶಾಸಕ ವಿನಯ್ ಕುಲಕರ್ಣಿ ಕೂಡ ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ ಹಾಗೂ ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥರೊಬ್ಬರು 2 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದರು. 2022ರಲ್ಲಿ ಕರೆ ಮಾಡಿ ಹಾವೇರಿ ಜಿಲ್ಲೆಯ ರೈತ ಹೋರಾಟಗಾರ್ತಿ ಎಂದು ಪರಿಚಯಿಸಿಕೊಂಡಿದ್ದ ಮಹಿಳೆಯೊಬ್ಬರು ಮಾತನಾಡಿದ್ದರು. ಇದೀಗ ಅವರು ತನಗೆ ವಂಚನೆ ಮಾಡಲಾಗಿದೆ. ನೀವು ಮಾತನಾಡಿರುವ ವಿಡಿಯೊ ಕಾಲ್, ಮೊಬೈಲ್ ಸಂಭಾಷಣೆ ಪ್ರಸಾರ ಮಾಡಲಾಗುವುದು ಎಂದು ಸುಳ್ಳು ಆರೋಪಗಳ ಮೂಲಕ ಷಡ್ಯಂತ್ರ ರೂಪಿಸಿದ್ದಾರೆ ಎಂದು ವಿನಯ್ ಕುಲಕರ್ಣಿ ದೂರಿದ್ದರು.
ದೂರಿನ ಅನ್ವಯ ಓರ್ವ ಮಹಿಳೆ ಸೇರಿದಂತೆ ಇಬ್ಬರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 308(2) ಹಾಗೂ 61(2)ರಡಿ ಪ್ರಕರಣ ದಾಖಲಾಗಿತ್ತು. ಇದೀಗ, ಸರ್ಕಾರ ಎರಡು ಪ್ರಕರಣಗಳ ತನಿಖೆ ನಡೆಸುವಂತೆ ಸಿಐಡಿಗೆ ಒಪ್ಪಿಸಿದೆ.
ಇದನ್ನೂ ಓದಿ: ಅತ್ಯಾಚಾರ ಆರೋಪ: ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಎಫ್ಐಆರ್