ETV Bharat / state

ಬರ ಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ರಾಜ್ಯ ಸರ್ಕಾರ - Drought Relief

author img

By ETV Bharat Karnataka Team

Published : Mar 23, 2024, 6:27 PM IST

Karnataka Government approaches Supreme Court against Central government for Release Drought Relief
ಸುಪ್ರೀಂ ಕೋರ್ಟ್ ಮೊರೆ ಹೋದ ರಾಜ್ಯ ಸರ್ಕಾರ

ಶೀಘ್ರವೇ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರದಿಂದ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರು: ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಈ ಬಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಐದು ತಿಂಗಳಾದರೂ ಬರ ಪರಿಹಾರ ಹಣ ಬಿಡುಗಡೆ ಮಾಡದಿರುವ ಕಾರಣ ಅನಿವಾರ್ಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ರಾಜ್ಯ ಸರ್ಕಾರದಿಂದ ಅರ್ಜಿ ಹಾಕಿದ್ದೇವೆ ಎಂದು ತಿಳಿಸಿದರು.

ಇಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿಗೆ ಸ್ವೀಕೃತಿ ಸಿಕ್ಕಿದೆ. ಮುಂದಿನ‌ ಒಂದು ವಾರ ರಜೆ ಇರುವ ಕಾರಣ ಬಳಿಕ ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆರ್ಟಿಕಲ್ 32 ಅಡಿ ರಿಟ್ ಪಿಟಿಷನ್ ಹಾಕಿದ್ದೇವೆ. ಶೀಘ್ರದಲ್ಲಿ ಬರ ಪರಿಹಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿ ಸಲ್ಲಿಕೆ ಮಾಡಿದ್ದೇವೆ. ಎನ್​ಡಿಆರ್​ಎಫ್ ಅಡಿ ಬರ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಸಿಎಂ ಮಾಹಿತಿ ನೀಡಿದರು.

ದೇಶದಲ್ಲಿ ಎನ್​ಡಿಆರ್​ಎಫ್​ ಕಾಯ್ದೆ ಇದೆ. ಬರಗಾಲ ಬಂದಾಗ, ಅತಿವೃಷ್ಟಿ ಬಂದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸಲು ಈ ಕಾನೂನು ಮಾಡಲಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಹಾಗಾಗಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚನೆ ಆಗುತ್ತೆ. ಅದರ ಶಿಫಾರಸು ಮೇರೆಗೆ ಎನ್​ಡಿಆರ್​ಎಫ್​, ಎಸ್​​ಡಿಆರ್​ಎಫ್​ ಹಣ ನಿಗದಿಯಾಗುತ್ತೆ ಎಂದರು.

ರಾಜ್ಯದಲ್ಲಿ ಒಟ್ಟು 223 ತಾಲೂಕುಗಳಲ್ಲಿ ಬರಗಾಲ ಇದೆ. 196 ತಾಲೂಕುಗಳು ತೀವ್ರ ಬರಗಾಲ ಇದೆ. 48 ಲಕ್ಷ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಈಗಾಗಲೇ ಮೂರು ಪತ್ರಗಳನ್ನು ಬರೆದಿದ್ದೇವೆ. 23.09.2023ಕ್ಕೆ ಮೊದಲ ಪತ್ರ, 20.10.2023ಕ್ಕೆ ಎರಡನೇ ಪತ್ರ ಕೊಟ್ಟಿದ್ದೇವೆ. ಮತ್ತೊಂದು ಪತ್ರವನ್ನು 15.11.2023ರಂದು ಕೊಟ್ಟಿದ್ದೇವೆ. ಕಾನೂನು ಪ್ರಕಾರ, ಮೊದಲ ಮೆಮೊರಾಡಂ ಕೊಟ್ಟಾಗ ವಾರದೊಳಗೆ ಅಂತರ ಇಲಾಖಾವಾರು ಕೇಂದ್ರ ತಂಡ ಬಂದು ರಾಜ್ಯ ಪ್ರವಾಸ ಮಾಡಬೇಕು ಎಂದಿದೆ. ಕೇಂದ್ರ ತಂಡವು ಅಕ್ಟೋಬರ್ ತಿಂಗಳಲ್ಲಿ ಬಂದು ಅ.4-9ರವರೆಗೆ ಪ್ರವಾಸ ಮಾಡಿ ಬರ ಅಧ್ಯಯನ ಕೈಗೊಂಡಿದೆ ಎಂದು ತಿಳಿಸಿದರು.

ಕೇಂದ್ರ ಅಧ್ಯಯನ‌ ತಂಡ ವರದಿ ಕೊಟ್ಟ ಒಂದು ತಿಂಗಳಲ್ಲಿ ರಾಜ್ಯಕ್ಕೆ ಕಾನೂನು ಪ್ರಕಾರ ಪರಿಹಾರ ಕೊಡಬೇಕು ಎಂದಿದೆ. ಅಧ್ಯಯನ ತಂಡ ಅ.20ಕ್ಕೆ ಗೃಹ ಸಚಿವಾಲಯಕ್ಕೆ ವರದಿ ಕೊಟ್ಟಿದ್ದರು ಎಂಬ ಮಾಹಿತಿ ಇದೆ. ನಮ್ಮ ಸಚಿವರು ಭೇಟಿ ಮಾಡಿ ಬರ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದೇವೆ. ನಾನೂ ಕೇಂದ್ರ ಗೃಹ ಸಚಿವರು ಹಾಗೂ ಹಣಕಾಸು ಸಚಿವೆಗೆ ಪತ್ರ ಬರೆದಿದ್ದೇನೆ. ಬಳಿಕ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಡಿ.20ಗೆ ಕೇಂದ್ರ ಗೃಹ ಸಚಿವರನ್ನು ನಾನು ಭೇಟಿಯಾಗಿದ್ದೇನೆ. ಆಗ ಅವರು ಡಿ.23 ಸಭೆ ಕರೆದಿದ್ದು, ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ, ಈವರೆಗೆ ಯಾವುದೇ ಉನ್ನತ ಮಟ್ಟದ ಸಭೆ ನಡೆಸಿಲ್ಲ ಎಂದರು.

ಇದೇ ವೇಳೆ ರೈತರಿಗೆ ಕಷ್ಟ ಆಗುತ್ತೆ ಎಂಬ ದೃಷ್ಟಿಯಿಂದ ತಾತ್ಕಾಲಿಕವಾಗಿ ಗರಿಷ್ಠ 2000 ರೂ.‌ನಂತೆ 33.44 ಲಕ್ಷ ರೈತರಿಗೆ 650 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದ್ದೇವೆ. ಮೇವಿಗಾಗಿ 40 ಕೋಟಿ ರೂ‌. ನೀಡಿದ್ದೇವೆ. ಒಟ್ಟು 870 ಕೋಟಿ ರೂ. ಈವರೆಗೆ ಬರ ಪರಿಹಾರವಾಗಿ ಹಣ ಬಿಡುಗಡೆ ಮಾಡಲಾಗಿದೆ. ಎಲ್ಲ ಡಿಸಿಗಳಲ್ಲಿ ಹಣ ಇದೆ. ತಹಶೀಲ್ದಾರ್ ನೇತೃತ್ವದಲ್ಲೂ ಕಾರ್ಯಪಡೆ ಮಾಡಿದ್ದೇವೆ. ರೈತರಿಗೆ 4,600 ಕೋಟಿ ರೂ. ಇನ್ ಪುಟ್ ಸಬ್ಸಿಡಿಗೆ ಹಣ ಬೇಕು ಎಂದರು.

ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ, ಇಂಥ ಸನ್ನಿವೇಶದಲ್ಲಿ ಅವರು ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂಬ ಕಾನೂನಿದೆ. ಬೇರೆ ದಾರಿ ಇಲ್ಲದೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಪರಿಹಾರ ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಮನವಿ ಮಾಡಿದ್ದೇವೆ. ಅನ್ಯಾಯ ಸರಿಪಡಿಸಿ ಅಂದರೆ ನಾವು ಯಾರ ಬಳಿ ಹೋಗಬೇಕು?. ನ್ಯಾಯ ಸಿಕ್ಕಿಲ್ಲವಾದರೆ ನಾವು ಎಲ್ಲಿಗೆ ಹೋಗಬೇಕು?. 18,171 ಕೋಟಿ ರೂ‌. ಬರ ಪರಿಹಾರ ಕೊಡಬೇಕು. ಕಾನೂನು ಸಂಘರ್ಷ ನಮ್ಮ ಉದ್ದೇಶ ಅಲ್ಲ. ನಾವು ಬಲವಂತವಾಗಿ ರಿಟ್ ಪಿಟಿಷನ್ ಹಾಕಬೇಕಾಗಿದೆ. ನಾವು ಬಿಕ್ಷೆ ಕೇಳುತ್ತಿಲ್ಲ.‌ ನಮ್ಮ ಹಣ ಕೊಡಿ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಸಿಎಂ ಹೇಳಿದರು.

ಇದನ್ನೂ ಓದಿ: 35 ಸಾವಿರ ಕೋಟಿ ರೂ. ಬೆಳೆ ನಷ್ಟ ಆಗಿದ್ದು, ಕೇಂದ್ರದಿಂದ ಬರ ಪರಿಹಾರ ಒಂದು ರೂಪಾಯಿ ಸಹ ಬಿಡುಗಡೆ ಇಲ್ಲ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.