ಬೆಂಗಳೂರು: ರಾಜ್ಯದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತಪ್ರಚಾರ ನಡೆಸಲು ಜೆಡಿಎಸ್ ಪಕ್ಷ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.
40 ಜನರಿರುವ ಈ ಪಟ್ಟಿಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ಬಿಡುಗಡೆ ಮಾಡಿದ್ದು, ಚುನಾವಣಾ ಆಯೋಗಕ್ಕೂ ರವಾನಿಸಿದ್ದಾರೆ. ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರನ್ನು ಕೈಬಿಟ್ಟಿರುವುದು ಗಮನಾರ್ಹ.
ಶಾಸಕರು, ಮಾಜಿ ಶಾಸಕರು, ಮಾಜಿ, ಹಾಲಿ ಸಂಸದರು, ಹಿರಿಯ ನಾಯಕರು, ಮಾಜಿ, ಹಾಲಿ ಎಂಎಲ್‌ಸಿಗಳು ಈ ಪಟ್ಟಿಯಲ್ಲಿದ್ದಾರೆ.
ಇತ್ತೀಚೆಗೆ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂಬ ಒತ್ತಾಯದ ವಿಚಾರಕ್ಕೆ ಸಂಬಂಧಿಸಿದಂತೆ ಜಿ.ಟಿ.ದೇವೇಗೌಡ ದಸರಾ ಉದ್ಘಾಟನಾ ವೇದಿಕೆಯಲ್ಲಿ ಕುಮಾರಸ್ವಾಮಿ ವಿರುದ್ಧ ಮಾತನಾಡಿದ್ದರು. ಬಳಿಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಮುಖ ಸ್ಟಾರ್ ಪ್ರಚಾರಕರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ಮಲ್ಲೇಶ್ ಬಾಬು, ಸುರೇಶ್ ಬಾಬು, ಅನಿತಾ ಕುಮಾರಸ್ವಾಮಿ, ಟಿ.ಎ.ಶರವಣ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಹರೀಶ್ ಗೌಡ, ಶರಣುಗೌಡ ಕಂದಕೂರು, ಬೋಜೇಗೌಡ ಸೇರಿದಂತೆ 40 ಮಂದಿ ನಾಯಕರು ಸ್ಟಾರ್ ಪ್ರಚಾರಕರಾಗಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣ ಉಪ ಚುನಾವಣೆ: 38 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ