ಮಂಗಳೂರು: ಕರ್ತವ್ಯ ಲೋಪ, ಹಿರಿಯ ಅಧಿಕಾರಿಗಳೊಂದಿಗೆ ಉಡಾಫೆಯ ವರ್ತನೆ, ಅಕ್ರಮ ಮರಳುಗಾರಿಕೆಯೊಂದಿಗೆ ಶಾಮೀಲು, ಸ್ಥಳೀಯರಿಗೆ ಕಿರಿಕಿರಿ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಠಾಣೆ ಇನ್‌ಸ್ಪೆಕ್ಟರ್ ಎಸ್.ಎಚ್. ಭಜಂತ್ರಿ ಅವರನ್ನು ನಗರ ಪೊಲೀಸ್ ಕಮಿಷನರ್ ಅಮಾನತು ಮಾಡಿ ಆದೇಶಿಸಿದ್ದಾರೆ.
ನಗರದ ಜೆಪ್ಪಿನಮೊಗರು ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಈ ಸ್ಥಳಕ್ಕೆ ದಾಳಿ ನಡೆಸಲು ಎಸಿಪಿ ಧನ್ಯಾ ನಾಯಕ್ ಅವರು ಕಂಕನಾಡಿ ನಗರ ಠಾಣಾ ಇನ್‌ಸ್ಪೆಕ್ಟರ್ ಭಜಂತ್ರಿಗೆ ಸೂಚಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಕ್ರಮ ಜರಗಿಸದೆ ಉಪೇಕ್ಷಿಸಿದ್ದಲ್ಲದೆ ಮೇಲಾಧಿಕಾರಿಗಳೊಂದಿಗೆ ಉಡಾಫೆಯಿಂದ ವರ್ತಿಸಿದ್ದರು ಎಂದು ಎಸಿಪಿಯವರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು.
ಅಲ್ಲದೆ ಭಜಂತ್ರಿಯವರು ತಮ್ಮ ಅಪಾರ್ಟ್‌ಮೆಂಟ್‌ನ ಇತರರೊಂದಿಗೆ ಕಿರಿಕಿರಿ ಆಗುವಂತೆ ವರ್ತಿಸುತ್ತಿದ್ದಾರೆಂದು ಅವರ ಮೇಲೆ ಆರೋಪಿಸಲಾಗಿದೆ. ಮರಳು ಮಾಫಿಯಾದೊಂದಿಗೆ ಶಾಮೀಲು, ಹಿರಿಯ ಅಧಿಕಾರಿಗಳ ಆದೇಶ ನಿರ್ಲಕ್ಷ್ಯ, ದೂರುದಾರರ ನಿರ್ಲಕ್ಷ್ಯ, ಅಪಾರ್ಟ್‌ಮೆಂಟ್‌ನ ಸಹವರ್ತಿಗಳೊಂದಿಗೆ ಅಗೌರವದಿಂದ ವರ್ತಿಸಿರುವ ಬಗ್ಗೆ ಖುದ್ದು ಎಸಿಪಿ ಧನ್ಯಾ ನಾಯಕ್ ಅವರೇ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಭಜಂತ್ರಿಯವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಅವರು, ಕಂಕನಾಡಿ ನಗರ ಠಾಣಾ ಇನ್ಸ್ ಪೆಕ್ಟರ್ ಭಜಂತ್ರಿ ಅವರನ್ನು ತಕ್ಷಣದ ಮೇಲ್ವಿಚಾರಣಾ ಅಧಿಕಾರಿಯ ವರದಿಯ ಆಧಾರದ ಮೇಲೆ 12/01/2023 ರಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಇವರ ವಿರುದ್ಧ ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಮತ್ತು ಇತರ ಅಕ್ರಮ ಚಟುವಟಿಕೆಗಳು, ಹಿರಿಯ ಅಧಿಕಾರಿಗಳಿಗೆ ವರದಿ ಮಾಡುವಲ್ಲಿ ನಿರ್ಲಕ್ಷ್ಯ ಮತ್ತು ಪೊಲೀಸ್ ಠಾಣಾ ಮಿತಿಯಲ್ಲಿ ಅಪರಾಧದಲ್ಲಿ ತೊಡಗಿರುವ ಸಕ್ರಿಯ ರೌಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಸೇರಿದಂತೆ ಇತರ ಪ್ರಮುಖ ದೂರುಗಳು ಸೇರಿವೆ. ಈ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಲಾಗುವುದು. ಅದರ ಆಧಾರದ ಮೇಲೆ ಮುಂದಿನ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.