ಕಲಬುರಗಿ: ಜಿಲ್ಲೆಯ ಪೊಲೀಸರು ಅಕ್ರಮ ಮರಳು ದಂಧೆ ಮೇಲೆ ಸಮರ ಸಾರಿದ್ದಾರೆ. ಎರಡು ದಿನ ಭೀಮಾ ನದಿ ತೀರದ ಗ್ರಾಮಗಳಲ್ಲಿ ಪ್ರತ್ಯೇಕ ದಾಳಿಗಳನ್ನು ನಡೆಸುವ ಮೂಲಕ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ ಭೀಮಾ ನದಿಯಿಂದ ತೆಗೆದು ಜಮೀನುಗಳಲ್ಲಿ ಸಂಗ್ರಹಿಸಿಟ್ಟಿದ್ದ 565 ಲೋಡ್ ಮರಳನ್ನು ಜಪ್ತಿ ಮಾಡಿದ್ದಾರೆ.
ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭೀಮಾ ನದಿ ತೀರದ ದೇಸಾಯಿ ಕಲ್ಲೂರು, ಗುಡ್ಡೆವಾಡಿ ಹಾಗೂ ಘತ್ತರಗಾ ಗ್ರಾಮದ ಜಮೀನುಗಳಲ್ಲಿ ಮರಳು ಸಂಗ್ರಹಿಸಿಟ್ಟಿದ್ದ ಸ್ಥಳಗಳಿಗೆ ಪೊಲೀಸರು ದಾಳಿ ನಡೆಸಿದರು. ಅಂದಾಜು ಏಳೂವರೆ ಲಕ್ಷ ರೂಪಾಯಿ ಮೌಲ್ಯದ 380 ಟ್ರ್ಯಾಕ್ಟರ್ ಟ್ರಾಲಿ ಮರಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ ಏಳು ಜನ ಜಮೀನು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಇನ್ನು ಭೀಮಾ ನದಿ ತೀರದ ಶಿವಪೂರ, ಬನ್ನಟ್ಟಿ ಗ್ರಾಮಗಳ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಅಂದಾಜು ಮೂರೂವರೆ ಲಕ್ಷ ರೂಪಾಯಿ ಮೌಲ್ಯದ 185 ಟ್ರ್ಯಾಕ್ಟರ್ ಟ್ರಾಲಿ ಮರಳು ಜಪ್ತಿ ಮಾಡಿದ್ದಾರೆ. ನಾಲ್ವರು ಜಮೀನು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಎಸ್ಪಿ ಅಕ್ಷಯ ಹಾಕೆ ಮಾಹಿತಿ ನೀಡಿದ್ದಾರೆ.
ಪಿಎಸ್ಐ ಸಸ್ಪೆಂಡ್, ಪಿಐಗೆ ನೋಟಿಸ್: ಕಾಳಗಿ ತಾಲೂಕಿನ ಕಲಗುರ್ತಿ ಗ್ರಾಮದ ದೇವಾನಂದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಿ, ಮತ್ತೊಬ್ಬ ಇನ್‌ಸ್ಪೆಕ್ಟರ್‌ಗೆ ಶಿಸ್ತು ಕ್ರಮದ ನೋಟಿಸ್ ನೀಡಲಾಗಿದೆ.
ಮಾಡಬೂಳ ಠಾಣೆಯಲ್ಲಿ ಸಬ್ ಇನ್‌ಸ್ಟೆಕ್ಟರ್ ಆಗಿದ್ದ ವಿಜಯ್ ಕುಮಾರ್ (ಪ್ರಸ್ತುತ ಯಾದಗಿರಿ ಸಂಚಾರ ಠಾಣೆಯ ಪಿಎಸ್‌ಐ) ಅವರನ್ನು ಅಮಾನತು ಮಾಡಲಾಗಿದೆ. ದೇವಾನಂದ ಆತ್ಮಹತ್ಯೆ ಸಂಬಂಧ ದಾಖಲಾದ 70/2023 ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿ, ಮಾಹಿತಿಯೂ ಸಂಗ್ರಹಿಸಿಲ್ಲ. ಆರೋಪಿಯನ್ನು ಪತ್ತೆ ಮಾಡಿ ಬಂಧನ ಮಾಡದಿರುವುದು ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದು, ಕಂಡು ಬಂದ ಹಿನ್ನೆಲೆ ವಿಜಯ್ ಕುಮಾರ್ ಅವರನ್ನು ಅಮಾನತಿನಲ್ಲಿ ಇರಿಸಲಾಗಿದೆ ಎಂದು ಈಶಾನ್ಯ ವಲಯ ಪೊಲೀಸ್ ಉಪ ಮಹಾನಿರ್ದೇಶಕ ಅಜಯ್ ಹಿಲೋರಿ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಇನ್‌ಸ್ಪೆಕ್ಟರ್ ವಿನಾಯಕ್ ಅವರಿಗೆ (ಪ್ರಸ್ತುತ ಸೈದಾಪುರ ಪಿಐ) ಶಿಸ್ತು ಕ್ರಮದ ನೋಟಿಸ್ ನೀಡಲಾಗಿದೆ. ನೋಟಿಸ್‌ನಲ್ಲಿ ತಮ್ಮ ಅಧೀನದ ಅಧಿಕಾರಿಯೊಬ್ಬರು ಪ್ರಕರಣದಲ್ಲಿ ಸರಿಯಾಗಿ ತನಿಖೆ ಮಾಡದಿರುವುದು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದು ಕಂಡು ಬಂದಿದೆ. ನಿಮ್ಮ ವಿರುದ್ಧ ಶಿಸ್ತಿನ ಕ್ರಮ ಯಾಕೆ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ನೋಟಿಸ್ ನೀಡಲಾಗಿದ್ದು, ಏಳು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ನಾಲ್ಕು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ವಜ್ರ ವಶಕ್ಕೆ - Diamonds seized