ಕಲಬುರಗಿ: ಒಂಟಿ ಮಹಿಳೆ ಮೇಲೆ ಆರೇಳು ಜನ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲಿಂಗಮ್ಮ ಎಂಬ ಮಹಿಳೆ ಹಲ್ಲೆಗೆ ಒಳಗಾದವಳು.
ಕಬ್ಬಿಣದ ರಾಡ್ , ಚಾಕು,ಕಲ್ಲಿನಿಂದ ಜಜ್ಜಿ ಮನಸೋಯಿಚ್ಚೆ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದೆ. ಹೊಲದ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಮಹಿಳೆಯ ಮೇಲೆ ಆರೇಳು ಜನ ಸೇರಿ ಎದೆ ತೊಡೆ ಸೇರಿ ಹಲವೆಡೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಕುರಿತು ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ಅಂಬಲಾಳ , ಮಲ್ಲು ಸಾಸನೂರ, ಸುರೇಶ್ ಸಾಸನೂರ , ಮಹೇಶ್ ಸಾಸನೂರ, ದಂಡವ್ವ , ಜಗದೇವಪ್ಪ ಸೇರಿ ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಲಿಂಗಮ್ಮ ನಾಗರಹಳ್ಳಿ ಗ್ರಾಮದ ನಾರಾಯಣ ಎಂಬುವರ ಹೊಲವನ್ನು ಪಾಲುದಾರಿಕೆ ಮೇಲೆ ವ್ಯವಸಾಯ ಮಾಡ್ತಿದ್ದರು. ನಾರಾಯಣ ಹೊಲ ನಿನ್ಯಾಕೆ ಪಾಲುದಾರಿಕೆಯಲ್ಲಿ ಮಾಡ್ತಿಯಾ? ಮಾಡಬೇಡ ಅಂತಾ ಜಗಳ ತೆಗೆದು, ಹಲ್ಲೆ ಮಾಡಲಾಗಿದೆ. ಗಾಯಗೊಂಡಿದ್ದ ಲಿಂಗಮ್ಮಳನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೈಲ್ವೆ ಹಳಿಯಲ್ಲಿ ಟ್ರಾವೇಲ್ಸ್ ಮಾಲೀಕನ ಶವ ಪತ್ತೆ: ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಕಾಂಗ್ರೆಸ್ ಮುಖಂಡ, ಕಲಬುರಗಿ ಶ್ರೇಯಾ ಟೂರ್ಸ್ ಅಂಡ್ ಟ್ರಾವೇಲ್ಸ್ ಮಾಲೀಕ ಅಣವೀರಯ್ಯ ಪ್ಯಾಟಿಮನಿ (40) ಅವರ ಶವ ರಾವೂರು ಸಮೀಪದ ರೈಲು ಹಳಿ ಮೇಲೆ ಪತ್ತೆಯಾಗಿದ್ದು, ಕೊಲೆ ಎಂದು ಶಂಕೆ ವ್ಯಕ್ತವಾಗಿದೆ.
ವಾಡಿ – ಶಹಾಬಾದ್ ಮಧ್ಯೆ ರೈಲು ಹಳಿಗಳ ಮೇಲೆ ಮಂಗಳವಾರ ಬೆಳಗ್ಗೆ ಛಿದ್ರಗೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪಿಎಸ್ಐ ಮಹೆಮೂದ್ ಭಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲಬುರಗಿ ನಗರದಲ್ಲಿ ವಾಸವಿದ್ದ ಅಣವೀರಯ್ಯ ಎರಡು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿದ್ದರು. ಬರುವಾಗ ಈ ಘಟನೆ ಜರುಗಿದೆ. 2016ರಲ್ಲಿ ಕೋಡ್ಲಿ ಜಿಪಂ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಕಲಬುರಗಿಯಲ್ಲಿ ಶ್ರೇಯಾ ಟೂರ್ಸ್ ಅಂಡ್ ಟ್ರಾವೇಲ್ಸ್ ನಡೆಸುತ್ತಿದ್ದರು. ಚಿಂಚೋಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾವಿಯಲ್ಲಿ ಬಿದ್ದು ಅಣ್ಣ ತಂಗಿ ಸಾವು:ಕಾಲೇಜಿಗೆ ಹೋಗು ಎಂದು ಅಣ್ಣ ಬೈದು ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ತಂಗಿ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ತಕ್ಷಣ ತಂಗಿಯನ್ನು ಉಳಿಸಲು ಬೆನ್ನ ಹಿಂದೆ ಬಾವಿಗೆ ಜಿಗಿದ ಅಣ್ಣ ಕೂಡ ಅದೇ ಬಾವಿಯಲ್ಲಿ ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ. ಪಟಪಳ್ಳಿಯ ಗ್ರಾಮದ ಅಣ್ಣ ಸಂದೀಪ್ (23), ತಂಗಿ ನಂದಿನಿ (19) ಮೃತಪಟ್ಟ ನತದೃಷ್ಟರು ಎಂದು ಗುರುತಿಸಲಾಗಿದೆ.
ನಂದಿನಿ ಪಿಯುಸಿ ಓದಿ ಕಾಲೇಜು ಬಿಟ್ಟಿದ್ದಳು. ಕಾಲೇಜಿಗೆ ಹೋಗು ಎಂದರೂ ಕೇಳದಿರುವುದರಿಂದ ಮನೆಯಲ್ಲಿ ಜಗಳವಾಗಿದೆ. ಆಗ ಮನೆಯಿಂದ ಓಡಿ ಹೋಗಿದ್ದಾಳೆ. ನಂದಿನಿಯನ್ನು ಅಣ್ಣ ಸಂದೀಪ್ ಹಿಂಬಾಲಿಸಿದ್ದಾನೆ. ತಂಗಿ ಬಾವಿಗೆ ಹಾರಿದಾಗ, ರಕ್ಷಿಸಲು ಅಣ್ಣನೂ ಜಿಗಿದಿದ್ದು ಇಬ್ಬರಿಗೂ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂಓದಿ:ಅಥಣಿಯಲ್ಲಿ ನವ ದಂಪತಿ ಕೊಲೆ ಪ್ರಕರಣ; ಪೊಲೀಸರು ಹೇಳಿದ್ದೇನು?