ದಾವಣಗೆರೆ : ತಾಲೂಕಿನ ಕೈದಾಳೆ ಗ್ರಾಮ ಕಳೆದ ಹಲವಾರು ದಶಕಗಳಿಂದ ಪವಾಡಗಳಿಗೆ ಪ್ರಸಿದ್ಧಿ ಪಡಿದಿದೆ. ಇಲ್ಲಿ ನಡೆಯುವ ಪವಾಡಗಳು ವೈದ್ಯಕೀಯ ಲೋಕಕ್ಕೆ ಸವಾಲಾಗಿವೆ. ಹೌದು, ಶ್ರೀ ಕ್ಷೇತ್ರ ಕೈದಾಳೆ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಯಲ್ಲಿ ಮಾಲೆ ಹಾಕಿದರೆ ಕುಡಿತದ ಚಟವನ್ನು ವ್ಯಸನಿಗಳು ಬಿಡುತ್ತಾರೆ.
ಕುಡಿತದ ಚಟಕ್ಕೆ ಬಿದ್ದಿರುವ ಅಥವಾ ಅವರ ಕುಟುಂಬಸ್ಥರು ಬಂದು ದೀಕ್ಷೆ ಪಡೆದುಕೊಂಡು ರುದ್ರಾಕ್ಷಿ ಮಾಲೆಯನ್ನು ಹಾಕಿದರೆ ಸಾಕು ಕುಡಿತದ ಚಟಕ್ಕೆ ಒಳಗಾಗುವುದಿಲ್ಲ. ಅಲ್ಲದೆ, ಮದ್ಯ ಸೇವನೆ ಬಗ್ಗೆ ಆಲೋಚನೆ ಸಹ ಮಾಡುವುದಿಲ್ಲ. ಸಾಕಷ್ಟು ಜನ ಮದ್ಯವನ್ನು ತ್ಯಜಿಸಿರುವ ಉದಾಹರಣೆಗಳಿವೆ. ಜೊತೆಗೆ ಆರೋಗ್ಯ, ಮನೆ ಸಮಸ್ಯೆ, ಮಕ್ಕಳು ಆಗದೆ ಇರುವುದು ಸೇರಿದಂತೆ ಇನ್ನೂ ಆನೇಕ ಸಮಸ್ಯೆಗಳಿಗೆ ಯಾವುದೇ ಔಷಧ ಇಲ್ಲದೇ ಮಲ್ಲಿಕಾರ್ಜುನ ಸ್ವಾಮಿ ಬಗೆಹರಿಸುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಈ ಬಗ್ಗೆ ಮಾತನಾಡಿದ ಭಕ್ತರಾದ ಪುನೀತ್, " ನಾನು ಚಿಕ್ಕಮಗಳೂರು ಜಿಲ್ಲೆಯವನು, ವಿಪರೀತ ಕುಡಿತದ ಚಟಕ್ಕೆ ಅಂಟಿಕೊಂಡು, ಮನೆ ಮಠಡದಿಂದ ದೂರ ಇದ್ದೆ. ನಮ್ಮ ಸಂಬಂಧಿ ಒಬ್ಬರು ಇಲ್ಲಿನ ವಿಳಾಸ ಹೇಳಿದರು. ತಕ್ಷಣ ನಮ್ಮ ಕುಟುಂಬದವರು ನಾನು ಒಬ್ಬನೆ ಮಗ ಎಂಬ ಕಾರಣಕ್ಕೆ ಧಾರ್ಮಿಕ ಕ್ಷೇತ್ರಕ್ಕೆ ಕರೆತಂದು ಮಾಲೆ ಹಾಕಿಸಿದರು. 6 ವರ್ಷದ ಹಿಂದೆ ಮಾಲೆ ಹಾಕಿಸಿದಾಗಿನಿಂದ ಮದ್ಯ ಮುಟ್ಟಿಲ್ಲ. ಇದೀಗ ಗುಟ್ಕಾ ಚಟ ಜಾಸ್ತಿ ಆಗಿದೆ. ಅದನ್ನು ಬಿಡಲು ಮತ್ತೆ ಸನ್ನಿಧಿಗೆ ಬಂದಿರುವೆ ಎಂದು ಹೇಳಿದರು.
ಅರ್ಚಕರಾದ ಉಮೇಶ್ ಪ್ರತಿಕ್ರಿಯಿಸಿ "ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆ ಆದ ಐದು ದಿನಗಳ ನಂತರ ರಥೋತ್ಸವ ನಡೆಯುತ್ತೆ. ಈ ಕ್ಷೇತ್ರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ತ್ರಿಮೂರ್ತಿಗಳು ಲಿಂಗ ರೂಪದಲ್ಲಿ ಉದ್ಭವಿಸಿರುವುದು ವಿಶೇಷ. ಸಂತಾನ ಭಾಗ್ಯದ ಸಮಸ್ಯೆಯನ್ನು ಬ್ರಹ್ಮ, ಆರೋಗ್ಯ ಸಮಸ್ಯೆಯನ್ನು ವಿಷ್ಣು, ಮಾಟಮಂತ್ರ ಸೇರಿದಂತೆ ಕುಡಿತ ಚಟವನ್ನು ಬಿಡಿಸುವ ಕೆಲವನ್ನು ಮಹೇಶ್ವರ ಮಾಡುತ್ತಾನೆ ಎಂಬ ನಂಬಿಕೆ ಇದೆ.
ವಿವಿಧ ರಾಜ್ಯಗಳಿಂದ ಕುಡಿತದ ಚಟ ಬಿಡಲು ಇಲ್ಲಿಗೆ ಭಕ್ತರು ಭೇಟಿ ಕೊಡುತ್ತಾರೆ. ಕೆಂಡಾರ್ಚನೆ ಕೂಡ ನಡೆಯುತ್ತದೆ. ಮಲ್ಲಜ್ಜನವರ ಪ್ರವೇಶ ಆವರಿಸಿಕೊಂಡಾಗ ಅಗ್ನಿ ಕುಂಡವನ್ನು ತುಳಿಯುವ ಮೂಲಕ ಪ್ರವಾಡ ಸೃಷ್ಟಿಸುತ್ತಾನೆ. ಮೂರು ಸೋಮವಾರ ತ್ರಿಮೂರ್ತಿಗಳಿಗೆ ಒಂದೊಂದು ವಾರ ತುಳಸಿ ಮಾಲೆ ಇಟ್ಟು ಅಭಿಷೇಕ ಮಾಡಿ ಪ್ರಮಾಣ ಮಾಡಿಸಿ ಅದಕ್ಕೆ ಸಾಕ್ಷಿಯಾಗಿ ಗಂಟೆ ಹೊಡೆಯುವುದರಿಂದ ಮದ್ಯ ವ್ಯಸನಿಗಳು ಕುಡಿತದ ಚಟದಿಂದ ದೂರ ಉಳಿಯುತ್ತಾರೆ. ಇದು ಕ್ಷೇತ್ರದ ಮಹಿಮೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ : ಹಾವೇರಿ: ಸಿಂದಗಿಮಠದಲ್ಲಿ ವಟುಗಳಿಂದ ಭಕ್ತರಿಗೆ ಊರೂಟ