ಕಡಬ (ದಕ್ಷಿಣ ಕನ್ನಡ): ಕಡಬ ತಾಲೂಕಿನ ಕುಂತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬದಿಯಲ್ಲಿ ಜೆಸಿಬಿಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಶಾಲಾ ಕಟ್ಟಡದ ಗೋಡೆ ಸಂಪೂರ್ಣವಾಗಿ ಬಿದ್ದಿರುವ ಘಟನೆ ಇಂದು ನಡೆದಿದೆ. ಘಟನೆಯಲ್ಲಿ ನಾಲ್ವರು ಶಾಲಾ ವಿದ್ಯಾರ್ಥಿನಿಯರು ಗಾಯಗೊಂಡಿದ್ದು, ವೈದ್ಯಕೀಯ ಚಿಕಿತ್ಸೆ ನೀಡುವ ಸಲುವಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟ್ಟಡ ಕುಸಿದ ವೇಳೆ ಶಾಲೆಯಲ್ಲಿನ ಮಕ್ಕಳು ಆಟವಾಡುವ ಸಲುವಾಗಿ ಹೊರಗಡೆ ಹೋಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಕೂಡಲೇ ಸಮಗ್ರ ವರದಿಯನ್ನು ಸಲ್ಲಿಸುವಂತೆ ಕಡಬ ತಹಶೀಲ್ದಾರರು ಸೂಚನೆ ನೀಡಿದ್ದಾರೆ. ಶಿಥಿಲಗೊಂಡಿರುವ ಕಟ್ಟಡದ ಬಳಿ ಜೆಸಿಬಿಯಿಂದ ಕೆಲಸ ಮಾಡಿರುವುದೇ ಅನಾಹುತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
![ಘಟನಾ ಸ್ಥಳದಲ್ಲಿ ಆಂಬ್ಯುಲನ್ಸ್](https://etvbharatimages.akamaized.net/etvbharat/prod-images/27-08-2024/22309861_ambu.jpg)
ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮಹೋಪಾತ್ರ, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ತಾಲೂಕು ವೈದ್ಯಾಧಿಕಾರಿ, ಕಾರ್ಯನಿರ್ವಹಣಾ ಅಧಿಕಾರಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲನೆ ನಡೆಸಿದರು. ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಘಟನಾ ಸ್ಥಳದಲ್ಲಿ ನೆರೆದಿದ್ದ ಪೋಷಕರು ಹಾಗೂ ಶಾಲೆಯ ಸಮಿತಿಯವರಿಗೆ ಅಧಿಕಾರಿಗಳು ಭರವಸೆ ನೀಡಿದರು.
ಇದನ್ನೂ ಓದಿ: 'ದಲಿತರು ಅಂದ್ರೆ ಒಂದೇ ಕುಟುಂಬ ಅಲ್ಲ': ಛಲವಾದಿ ನಾರಾಯಯಣಸ್ವಾಮಿ ಹೀಗೆ ಅಂದಿದ್ದೇಕೆ? - Chalavadi Narayanaswamy