ಶಿವಮೊಗ್ಗ: "ದೆಹಲಿಯಲ್ಲಿ ನಾನೇ ಅಮಿತ್ ಶಾ ಅವರನ್ನು ಮನವೊಲಿಸಿ, ನನ್ನ ಸ್ಪರ್ಧೆ ಏತಕ್ಕಾಗಿ ಅಂತಾ ತಿಳಿಸಿ ಬರುತ್ತೇನೆ" ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಇಂದು ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, "ನಮ್ಮ ದೇಶದ ಉಕ್ಕಿನ ಮನುಷ್ಯ ಅಮಿತ್ ಶಾ ನನಗೆ ದೆಹಲಿಗೆ ಬರಲು ಹೇಳಿದ್ದಾರೆ. ಇಂದು ಮಧ್ಯಾಹ್ನ ಶಿವಮೊಗ್ಗದಿಂದ ವಿಮಾನದ ಮೂಲಕ ತೆರಳುತ್ತಿದ್ದೇನೆ. ರಾತ್ರಿ 7.20ಕ್ಕೆ ದೆಹಲಿಯಲ್ಲಿ ಇರುತ್ತೇನೆ. ಇಂದು ರಾತ್ರಿಯೇ ಅಮಿತ್ ಶಾ ಅವರನ್ನು ಭೇಟಿ ಆಗಬೇಕು ಅಂತಾ ಹೇಳಿದ್ದಾರೆ. ಅವರ ನಿವಾಸದಲ್ಲಿ ಭೇಟಿ ಆಗುತ್ತೇನೆ ಎಂದು ತಿಳಿಸಿದರು.
"ಅಪ್ಪ ಮಕ್ಕಳಿಂದ ಈ ಪಕ್ಷ ಮುಕ್ತವಾಗಬೇಕು. ಹಿಂದುತ್ವವಾದಿಗಳನ್ನು ಪಕ್ಕಕ್ಕೆ ಸರಿಸಿದ್ದಾರೆ. ಅವರನ್ನೆಲ್ಲ ಏಕೆ ಪಕ್ಕಕ್ಕೆ ಸರಿಸಿದ್ದಾರೆ ಅದನ್ನು ಕೇಳುತ್ತೇನೆ. ದೆಹಲಿಗೆ ನಾನು ಹಾಗೂ ಮಾಜಿ ಕಾರ್ಪೋರೇಟರ್ ವಿಶ್ವಾಸ್ ಇಬ್ಬರೇ ಹೋಗುತ್ತಿದ್ದೇವೆ. ಅಮಿತ್ ಶಾ ಬೇರೆ ಕಡೆ ಮನವೊಲಿಸುವುದಕ್ಕೂ ನನ್ನನ್ನು ಮನವೊಲಿಸುವುದಕ್ಕೂ ವ್ಯತ್ಯಾಸ ಇದೆ. ರಾಘವೇಂದ್ರ ಸೋಲಬಹುದು. ಹಾಗಾಗಿ ಪೋನ್ ಮಾಡಿ ಅಂತಾ ಅಮಿತ್ ಶಾ ಮೇಲೆ ಒತ್ತಡ ಹಾಕಿರಬಹುದು. ಹೀಗಾಗಿ ಅವರು ಪೋನ್ ಮಾಡಿದ್ದಾರೆ. ಅವರು ಹಿರಿಯರು ಗೌರವ ಕೊಟ್ಟು ಹೋಗುತ್ತಿದ್ದೇನೆ" ಎಂದರು.
ಮುಂದುವರೆದು, "ನೂರಕ್ಕೆ ನೂರು ವಿಶ್ವಾಸ ಇದೆ. ನಾನು ಈ ಬಾರಿ ಗೆಲ್ಲುತ್ತೇನೆ. ಕೇವಲ ಎಂಪಿ ಆಗಬೇಕು ಎಂದು ಬಯಸಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಪಕ್ಷ ಶುದ್ದೀಕರಣ ಆಗಬೇಕು ಅದಕ್ಕಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಸ್ಪರ್ಧೆ ಮಾಡುತ್ತೇನೆ ಎಂದು ನಿರ್ಧಾರ ಮಾಡಿದ ಮೇಲೆ ಅನೇಕರು ನನಗೆ ಪೋನ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ ಅಂತಿದ್ದಾರೆ. ಪಕ್ಷದ ಉಳಿವಿಗಾಗಿ ನನ್ನ ಸ್ಪರ್ಧೆ ಎಂದು ಈಶ್ವರಪ್ಪ ಇದೇ ವೇಳೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಅಮಿತ್ ಶಾಗೂ ಹೇಳಿ ಬರುತ್ತೇನೆ: ಕೆ.ಎಸ್. ಈಶ್ವರಪ್ಪ - K S Eshwarappa