ಶಿವಮೊಗ್ಗ: ನಾನು ಗೆಲ್ಲುತ್ತೇನೆ ಎಂಬ ಭಯ ಹುಟ್ಟಿದ್ದರಿಂದ ಕಾಂಗ್ರೆಸ್ ಮತ್ತು ಬಿ.ವೈ. ರಾಘವೇಂದ್ರ ಹೊಂದಾಣಿಕೆಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ.
ತಮ್ಮ ಚುನಾವಣೆ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಅವರಿಬ್ಬರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕ್ಷೇತ್ರದಲ್ಲಿ ಕಾಂಗ್ರೆಸ್ನ ಒಬ್ಬೆ ಒಬ್ಬ ಕಾರ್ಯಕರ್ತರು ಪ್ರಚಾರ ಮಾಡಿದ್ದು ಕಂಡಿಲ್ಲ, ಅಭ್ಯರ್ಥಿಪರ ಪಾಂಪ್ಲೆಟ್ಗಳನ್ನು ಹಂಚಿದ್ದು ನೋಡಿಲ್ಲ. ಅವರು ಒಬ್ಬರಿಗೊಬ್ಬರು ಟೀಕೆ ಮಾಡಿಕೊಳ್ಳದೇ ನನ್ನನ್ನು ಮಾತ್ರ ಟೀಕಿಸುತ್ತಿದ್ದಾರೆ. ನನಗೆ ಯುವಕರಿಂದ ಹಿಡಿದು ಪ್ರತಿಯೊಬ್ಬರ ಬೆಂಬಲ ಸಿಗುತ್ತಿದೆ ಎಂದರು.
ನಾನು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ಭಯದಿಂದ ನನ್ನ ವಿರುದ್ಧ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಕೆಎಸ್ಈ ದೂರಿದರು.
ಸಿಎಂ-ಡಿಸಿಎಂ ಟೀಕಿಸುವುದು ನಿಲ್ಲಿಸಲಿ: ಸಂವಿಧಾನ ಮತ್ತು ಆರ್ಎಸ್ಎಸ್ ಬಗ್ಗೆ ಸಿಎಂ, ಡಿಸಿಎಂ ಟೀಕೆ ಮಾಡುವುದನ್ನು ನಿಲ್ಲಿಸಬೇಕು. ಬಿಜೆಪಿಯವರು ಸಂವಿಧಾನವನ್ನು ತಿದ್ದುಪಡಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಅದಕ್ಕೆ ಆರ್ಎಸ್ಎಸ್ ಬೆಂಬಲಿಸುತ್ತಿದೆ ಎಂದು ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇಷ್ಟಾದರೂ ಕೂಡ ಸಿಎಂ ಅವರು ಈ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗೆ ಟೀಕಿಸಿದರೆ ಹೆಚ್ಚಿನ ಮತಗಳು ಸಿಗುತ್ತವೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ನೀವು ಎಷ್ಟು ಟೀಕೆ ಮಾಡುತ್ತಿರೋ ಅಷ್ಟೇ ನಿಮಗೆ ನಷ್ಟವಾಗಲಿದೆ ಎಂದು ಈಶ್ವರಪ್ಪ ಹೇಳಿದರು.
ಈಶ್ವರಪ್ಪ ಮತ್ತು ಕಾರಜೋಳಗೆ ನನ್ನ ಬೆಂಬಲ: ಶಿವಮೊಗ್ಗದಲ್ಲಿ ಈಶ್ಬರಪ್ಪನವರಿಗೆ, ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಅವರನ್ನು ನಾನು ಬೆಂಬಲಿಸುತ್ತೆನೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ನಾನು ಸ್ವಯಂ ಪ್ರೇರಿತನಾಗಿ ಬಂದಿದ್ದು ಈಶ್ವರಪ್ಪನವರ ಪರ ಪ್ರಚಾರ ನಡೆಸುತ್ತಿದ್ದೇನೆ. ಜಿಲ್ಲೆಯಲ್ಲಿ ನಮ್ಮ ಬೋವಿ ಸಮಾಜದ 1.50 ಲಕ್ಷ ಮತದಾರರಿದ್ದಾರೆ. ಕೊಲ್ಲೂರು ಭಾಗದಲ್ಲೂ ಸಹ ಇದ್ದಾರೆ. ಚಿತ್ರದುರ್ಗ ಕ್ಷೇತ್ರದಲ್ಲಿ ನಾನು ಯಾವುದೇ ಪಕ್ಷದಲ್ಲಿ ಇಲ್ಲ. 2014 ರಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೆ. ನಮ್ಮ ಗುರಿ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕು ಅನ್ನೋದು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ಎಂಪಿ ಆಗಬೇಕು ಎಂದರು.
ಇದನ್ನೂ ಓದಿ: "ರಾಜಕೀಯಕ್ಕೆ ಸಾಫ್ಟ್ ಆಗಿಯೇ ಇರಬೇಕು, ರಫ್ ಆಗಿರಬಾರದು": ಶಿವರಾಜಕುಮಾರ್ - Shivarajkumar