ಬೆಂಗಳೂರು: ಮುಡಾ ಅಕ್ರಮ ಆರೋಪ ಬೆನ್ನಲ್ಲೇ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷ ಸ್ಥಾನಕ್ಕೆ ಕೆ. ಮರೀಗೌಡ ರಾಜೀನಾಮೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಇಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದರು.
ಮುಡಾ ಅಕ್ರಮ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿರುವ ವೇಳೆ ಕೆ. ಮರೀಗೌಡ ರಾಜೀನಾಮೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲು ಸೂಚಿಸಿದ ಹಿನ್ನೆಲೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಮರೀಗೌಡ ತಿಳಿಸಿದ್ದಾರೆ.
ಮುಡಾ ಅಕ್ರಮ ಸಂಬಂಧ ಮರೀಗೌಡ ವಿರುದ್ಧ ಸಿದ್ದರಾಮಯ್ಯ ಬೆಂಬಲಿಗರು ಅಸಮಾಧಾನಗೊಂಡಿದ್ದರು. ಮರೀಗೌಡ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದರು. ಇದೀಗ ಮುಡಾ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ನನ್ನ ಆರೋಗ್ಯವೂ ಸರಿ ಇಲ್ಲದ ಕಾರಣ ರಾಜೀನಾಮೆ ಕೊಟ್ಟಿದ್ದೇನೆ. ನನ್ನ ರಾಜೀನಾಮೆಗೆ ನಗರಾಭಿವೃದ್ಧಿ ಸಚಿವರು ಒತ್ತಡ ಹೇರಿಲ್ಲ ಎಂದು ಇದೇ ವೇಳೆ ಮರೀಗೌಡ ಸ್ಪಷ್ಟಪಡಿಸಿದ್ದಾರೆ.
ಕೆ ಮರೀಗೌಡ ಸ್ಪಷ್ಟನೆ; ಮುಡಾ ಅಕ್ರಮ ಆರೋಪ ಸಂಬಂಧ ತನಿಖೆ ನಡೆಯುತ್ತಿದೆ. ಆ ಬಗ್ಗೆ ಈಗ ನಾನು ಏನೂ ಪ್ರತಿಕ್ರಿಯಿಸಲ್ಲ. ನಿವೇಶನ ಹಂಚಿಕೆ ಸಂಬಂಧ ಸಿಎಂ ನನ್ನ ಮೇಲೆ ಯಾವುದೇ ಒತ್ತಡ ಹಾಕಿರಲಿಲ್ಲ. ತನಿಖೆಯಲ್ಲಿ ಸತ್ಯ ಹೊರ ಬರಲಿದೆ. ಆರೋಗ್ಯ ಸರಿ ಇಲ್ಲದ ಕಾರಣ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ. ಯಾವುದೇ ಒತ್ತಡಕ್ಕೆ ಒಳಗಾಗಿ ರಾಜೀನಾಮೆ ನೀಡಿಲ್ಲ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ನಮ್ಮ ನಾಯಕರು. 40 ವರ್ಷಗಳಿಂದ ನಾನು ಸಿದ್ದರಾಮಯ್ಯ ಅವರ ಜೊತೆಯಲ್ಲಿ ಇದ್ದೇನೆ. ನನ್ನನ್ನು ಅವರು ತಾಲೂಕು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಮಾಡಿದ್ದರು. ಯಾವತ್ತೂ ಕೂಡಾ ಸಿದ್ದರಾಮಯ್ಯ ಅವರು ಅಕ್ರಮ ಮಾಡಿ ಅಂತಾ ಹೇಳಿಲ್ಲ. ಮುಡಾ ವಿಚಾರದಲ್ಲೂ ಸಿಎಂ ಒತ್ತಡ ಹಾಕಿಲ್ಲ. ನನಗೆ ಎರಡು ಬಾರಿ ಸ್ಟ್ರೋಕ್ ಆಗಿರುವುದರಿಂದ ಆರೋಗ್ಯ ಸರಿ ಇಲ್ಲ. ಹೀಗಾಗಿ ಮುಡಾ ಅಧ್ಯಕ್ಷರಾಗಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಕರಣ ಹಿನ್ನೆಲೆ: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮೈಸೂರಿನ ಪ್ರಮುಖ ಪ್ರದೇಶದಲ್ಲಿ ಮುಡಾ ಸ್ವಾಧೀನಪಡಿಸಿಕೊಂಡಿರುವ ಭೂಮಿಗಿಂತ ಅಧಿಕ ಮೌಲ್ಯದ ನಿವೇಶವನ್ನು ಪರಿಹಾರವಾಗಿ ಹಂಚಿಕೆ ಮಾಡಲಾಗಿದೆ ಎಂಬುದು ಆರೋಪವಾಗಿದೆ. ಮುಡಾದಿಂದ ಪಾರ್ವತಿ ಅವರಿಗೆ 50:50 ಅನುಪಾತದ ಯೋಜನೆಯಡಿ ಅವರ 3.16 ಎಕರೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಮಂಜೂರು ಮಾಡಿದೆ. ಪಾರ್ವತಿ ಅವರಿಗೆ 3.16 ಎಕರೆ ಜಮೀನಿನ ಮೇಲೆ ಯಾವುದೇ ಕಾನೂನು ಹಕ್ಕು ಇಲ್ಲ ಎಂದು ಆರ್ಟಿಐ ಕಾರ್ಯಕರ್ತರು ಕೋರ್ಟ್ ಮೊರೆ ಹೋಗಿದ್ದರು.
ಮುಡಾ ಹಗರಣದ ಆರೋಪ ಪ್ರಬಲವಾದ ಹಿನ್ನೆಲೆ ತನಿಖೆಗಾಗಿ ಕಾಂಗ್ರೆಸ್ ಸರ್ಕಾರ ಜುಲೈ 14 ರಂದು ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಪಿ ಎನ್ ದೇಸಾಯಿ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿತು.
ಜುಲೈ 26ರಂದು ಟಿ ಜೆ ಅಬ್ರಹಾಂ ಸಲ್ಲಿಸಿದ್ದ ಅರ್ಜಿ ಆಧಾರದ ಮೇಲೆ ರಾಜ್ಯಪಾಲರು ಸಿಎಂಗೆ ಕಾರಣ ಕೇಳಿ, ಸರ್ಕಾರಕ್ಕೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ಆಗಸ್ಟ್ 1ರಂದು ಸಿಎಂ ಗೈರಿನಲ್ಲಿ ಸಂಪುಟ ನಿರ್ಧಾರ ಕೈಗೊಂಡು, ಶೋಕಾಸ್ ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ಮಾಡಿ, ಅರ್ಜಿಯನ್ನು ತಿರಸ್ಕರಿಸಿತ್ತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ ತಮ್ಮ ಕುಟುಂಬಸ್ಥರಿಗೆ ನಿಯಮ ಬಾಹಿರವಾಗಿ ನಿವೇಶನಗಳನ್ನು ಪಡೆದ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು.
ಇದನ್ನೂ ಓದಿ: ಮುಡಾ ಪ್ರಕರಣ: ತನಿಖೆಗೆ ಹಾಜರಾಗುವಂತೆ ಇಬ್ಬರಿಗೆ ಮೈಸೂರು ಲೋಕಾಯುಕ್ತದಿಂದ ನೋಟಿಸ್