ಮೈಸೂರು: "ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ ಮೈಸೂರಿನಲ್ಲಿ ಭೂ ಕಬಳಿಕೆ ಪಕ್ಷಿನೋಟ" ಎಂಬ ಫ್ಲೆಕ್ಸ್ ಹಾಕಿರುವುದನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಮಾಜಿ ಸಚಿವ ಸಾ.ರಾ. ಮಹೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮುಂಜಾಗ್ರತೆಯಾಗಿ ಪೊಲೀಸರು ಸಾ.ರಾ. ಮಹೇಶ್ ಹಾಗೂ ಇತರ ಬೆಂಬಲಿಗರನ್ನು ವಶಕ್ಕೆ ಪಡೆದರು.
ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಜನಾಂದೋಲನ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದ ಸುತ್ತ ಪ್ರಮುಖ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ಫ್ಲೆಕ್ಸ್ಗಳನ್ನು ಹಾಕಲಾಗಿದೆ.
ಇದರ ಜತೆಗೆ ಪ್ರಮುಖ ಸರ್ಕಲ್ಗಳಲ್ಲಿ 2023 ರ ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ನೀಡಿರುವ ಜಾಹೀರಾತು ಎಂಬ ಅಡಿ ಬರಹದ ಕೆಳಗೆ "ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬದ ಭೂ ಕಬಳಿಕೆಯ ಪಕ್ಷಿ ನೋಟ" ಎಂಬ ಫ್ಲೆಕ್ಸ್ ಹಾಕಲಾಗಿದೆ. ಅದರಲ್ಲಿ ದೇವೇಗೌಡರ ಕುಟುಂಬದ ಬಗ್ಗೆ ಹಾಗೂ ಆ ಕುಟುಂಬದ ಸದಸ್ಯರ ಭೂ ಕಬಳಿಕೆ ವಿವರಗಳನ್ನು ಹಾಕಲಾಗಿದೆ.
ಈ ಬಗ್ಗೆ ಜೆಡಿಎಸ್ ಮೈಸೂರು ಘಟಕ ಹಾಗೂ ಮಾಜಿ ಸಚಿವ, ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ನೇತೃತ್ವದಲ್ಲಿ ಫ್ಲೆಕ್ಸ್ಗಳನ್ನು ಹಾಕಿರುವ ಕಡೆ ಆಗಮಿಸಿ ವಿರೋಧ ವ್ಯಕ್ತಪಡಿಸಿದರು. ಈ ವೇಳೆ, ಪೊಲೀಸರ ಜತೆ ಮಾತಿನ ಚಕಮಕಿ ನಡೆದಿದ್ದರಿಂದ ಸಾ.ರಾ. ಮಹೇಶ್ ಹಾಗೂ ಇತರ ಮೈಸೂರು ನಗರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಸದ್ಯ ಎಲ್ಲರನ್ನು ನಗರದ ಸಿಆರ್ ಗ್ರೌಂಡ್ನಲ್ಲಿ ಇಟ್ಟಿದ್ದು, ಅಲ್ಲಿಯೂ ಸಹ ಪ್ರತಿಭಟನೆ ನಡೆಸುತ್ತಿದ್ದಾರೆ. ಹೆಚ್ಚಿನ ಜೆಡಿಎಸ್ ಕಾರ್ಯಕರ್ತರು ಆಗಮಿಸುತ್ತಿದ್ದು, ಫ್ಲೆಕ್ಸ್ಗಳನ್ನು ಹಾಕಿರುವ ಕಡೆ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ: 2014ರಲ್ಲಿ ನಾನು ಸಿಎಂ ಆಗಿದ್ದಾಗಲೇ ಪತ್ನಿ ಮುಡಾ ಸೈಟ್ಗೆ ಅರ್ಜಿ ಕೊಟ್ಟಿದ್ದರು: ಸಿದ್ದರಾಮಯ್ಯ - CM Siddaramaiah