ಹಾಸನ: ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ, ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣನವರ ಹಿರಿಯ ಪುತ್ರ ಹಾಗು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ (37) ಅವರನ್ನು ಕಳೆದ ರಾತ್ರಿ ಹೊಳೆನರಸೀಪುರ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೂರಜ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 377 (ಅಸಹಜ ಲೈಂಗಿಕ ದೌರ್ಜನ್ಯ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ) ಹಾಗೂ 506 (ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಏನಿದು ಪ್ರಕರಣ?: ಸೂರಜ್ ರೇವಣ್ಣ ವಿರುದ್ಧ ಜೆಡಿಎಸ್ ಕಾರ್ಯಕರ್ತರೊಬ್ಬರು ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ತನ್ನ ಮೇಲೆ ಹೊಳೆನರಸೀಪುರದ ಗನ್ನಿಕಂಡದ ಫಾರ್ಮ್‌ಹೌಸ್‌ನಲ್ಲಿ ಜೂನ್ 16ರ ಸಂಜೆ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಈ ಆರೋಪಗಳನ್ನು ಸೂರಜ್ ರೇವಣ್ಣ ನಿರಾಕರಿಸಿದ್ದರು. ತನ್ನಿಂದ 5 ಕೋಟಿ ರೂಪಾಯಿ ಹಣ ಪಡೆಯಲು ಚೇತನ್ ಎಂಬ ವ್ಯಕ್ತಿ ಸುಳ್ಳು ಪ್ರಕರಣ ದಾಖಲಿಸಿದ್ದಾಗಿ ಅವರು ತಿಳಿಸಿದ್ದರು. ಶುಕ್ರವಾರ ಈ ಹಿನ್ನೆಲೆಯಲ್ಲಿ ಸೂರಜ್ ರೇವಣ್ಣ ನೀಡಿರುವ ದೂರಿನಂತೆ ಪೊಲೀಸರು ಚೇತನ್ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿಕೊಂಡಿದ್ದರು.
ಸೂರಜ್ ರೇವಣ್ಣನವರ ಸಹೋದರ ಪ್ರಜ್ವಲ್ ರೇವಣ್ಣ ದೇಶದ ಗಮನ ಸೆಳೆದ ಹಾಸನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಸಿಲುಕಿ ಸದ್ಯ ಜೈಲಿನಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದರು. ತನ್ನ ವಿರುದ್ಧದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಈ ಪ್ರಕರಣದ ತನಿಖೆಗೆ ನೇಮಕ ಮಾಡಿದ್ದ ವಿಶೇಷ ತನಿಖಾ ದಳ (ಎಸ್‌ಐಟಿ) ನಂತರ ಪ್ರಜ್ವಲ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿತ್ತು.
ಇನ್ನು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಅಪಹರಣ ಕೇಸ್‌ನಲ್ಲಿ ಇವರ ತಂದೆ, ಎಚ್.ಡಿ.ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಜಾಮೀನು ಪಡೆದಿದ್ದಾರೆ.