ಬೆಂಗಳೂರು: ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ಆರೋಪಿಯಾಗಿರುವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣಗೆ 42ನೇ ಎಸಿಎಂಎಂ ನ್ಯಾಯಾಲಯವು ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಐದು ಲಕ್ಷ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ಒದಗಿಸುವಂತೆ ಆದೇಶಿಸಿ ರೇವಣ್ಣಗೆ ನ್ಯಾಯಾಲಯವು ಜಾಮೀನು ನೀಡಿದೆ.
ಅಪಹರಣ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವಾಗಲೇ ಜಾಮೀನು ಪಡೆದು ಹೊರ ಬಂದಿದ್ದ ರೇವಣ್ಣಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಸಂಕಷ್ಷ ಎದುರಾಗಿತ್ತು. ಇದೀಗ ಎರಡನೇ ಪ್ರಕರಣದಲ್ಲಿಯೂ ಜಾಮೀನು ದೊರೆತ ಬಳಿಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಸರ್ಕಾರದ ಪರ ಎಸ್‌ಪಿಪಿ, ಹೊಳೆನರಸೀಪುರ ಪ್ರಕರಣದಲ್ಲಿ ಈ ಹಿಂದೆ ಲೈಂಗಿಕ ಕಿರುಕುಳ ಆರೋಪದಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಸೆಕ್ಷನ್ 376ನ್ನು ಸೇರ್ಪಡೆ ಮಾಡಲಾಗಿದೆ. ಸಂತ್ರಸ್ತೆಗೆ ಜೀವ ಭಯ ಇದೆ ಎಂಬುದಾಗಿ ಹೇಳಲಾಗಿದೆ. ಆದ್ದರಿಂದ ಜಾಮೀನು ಮಂಜೂರು ಮಾಡಬಾರದು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು. ಈ ಸಂಬಂಧ ಸುಪ್ರೀಂಕೋರ್ಟ್ ಹಲವು ತೀರ್ಪುಗಳಲ್ಲಿ ತಿಳಿಸಿದೆ. ಅಲ್ಲದೇ ಅತ್ಯಾಚಾರ ಆರೋಪ ಸಂಬಂಧದ ತನಿಖೆ ಮುಂದುವರೆದಿದೆ. ಈ ಹಿನ್ನೆಲೆ ಜಾಮೀನು ಮಂಜೂರು ಮಾಡಬಾರದು ಎಂದು ಎಸ್‌ಪಿಪಿ ನ್ಯಾಯಾಲಯಕ್ಕೆ ವಿವರಿಸಿದ್ದರು.
ವಕೀಲರು ಇದೊಂದು ಲೈಂಗಿಕ ಕಿರುಕುಳ ಆರೋಪ ಪ್ರಕರಣವಾಗಿದ್ದು, ಇನ್ ಕ್ಯಾಮೆರಾ ವಿಚಾರಣೆಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದರು. ರೇವಣ್ಣ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, ಪ್ರಕರಣದಲ್ಲಿ ದೂರನ್ನು ಹೇಗೆ ದಾಖಿಸಲಾಗಿದೆ ಎಂಬುದರ ವಿವರಣೆ ಇದೆ . ಇದೊಂದು ರೀತಿಯಲ್ಲಿ ಅರೇಬಿಯನ್ ನೈಟ್ ಕಥೆಯ ರೀತಿಯಲ್ಲಿದೆ. ಸಂತ್ರಸ್ತೆ ದೂರನ್ನು ಟೈಪ್ ಮಾಡಿ ದಾಖಲಿಸಲಾಗಿದೆ. ಸಿಆರ್‌ಪಿಸಿ 154ರ ಅಡಿ ಅತ್ಯಾಚಾರ ಆರೋಪ ಪ್ರಕರಣಗಳನ್ನು ಮಹಿಳಾ ಅಧಿಕಾರಿ ದೂರು ದಾಖಲಿಸಿಕೊಳ್ಳಬೇಕು. ಸಂತ್ರಸ್ತೆ ಹೇಳಿಕೆ ವಿಡಿಯೋ ಮಾಡಬೇಕಿತ್ತು. ಮಹಿಳೆಯ ಘನತೆ ಕಾಪಾಡುವ ನಿಟ್ಟಿನಲ್ಲಿ ಕಾಯಿದೆಗೆ 2013ರಲ್ಲಿ ತಿದ್ದುಪಡಿ ತರಲಾಗಿದೆ. ಆದರೆ, ಇದನ್ನು ಪಾಲಿಸಲಾಗಿಲ್ಲ. ಪುರುಷ ದೂರು ದಾಖಲಿಸಿದ್ದಾರೆ. ಎಫ್‌ಐಆರ್ ಅನ್ನು ಕಾನೂನು ಬಾಹಿರವಾಗಿ ದಾಖಲಿಸಲಾಗಿದೆ ಎಂದು ವಾದ ಮಂಡಿಸಿದ್ದರು. ಎರಡು ಕಡೆ ವಾದ - ಪ್ರತಿವಾದ ಆಲಿಸಿದ್ದ ನ್ಯಾಯಾಲಯವು ಇಂದಿಗೆ ಜಾಮೀನು ಆದೇಶವನ್ನ ಕಾಯ್ದಿರಿಸಿದ್ದರು.
ರೇವಣ್ಣ ಜಾಮೀನು ರದ್ದುಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸರ್ಕಾರ ಸಿದ್ಧತೆ: ಲೈಂಗಿಕ ಕಿರುಕುಳ ಆರೋಪದಲ್ಲಿ ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣ ಅವರಿಗೆ ಜಾಮೀನು ನೀಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದೆ.
ಈ ಸಂಬಂಧ ಹೈಕೋರ್ಟ್‌ನ ಎಸ್‌ಪಿಪಿ ಕಚೇರಿಯ ಮೂಲಗಳು ಈಟಿವಿ ಭಾರತ್‌ಗೆ ಖಚಿತ ಪಡಿಸಿವೆ. ಪ್ರಸ್ತುತ ಹೈಕೋರ್ಟ್‌ಗೆ ಬೇಸಿಗೆ ರಜೆ ಇದೆ. ಆದರೆ, ಮಂಗಳವಾರ ರಜಾಕಾಲದ ಪೀಠ ಕಾರ್ಯ ನಿರ್ವಹಣೆ ಮಾಡಲಿದೆ. ಈಗಾಗಲೇ ಅರ್ಜಿಯನ್ನು ಸಿದ್ಧಪಡಿಸಲಿದ್ದು, ಮಂಗಳವಾರ ನ್ಯಾಯಾಲಯದ ಮುಂದೆ ಪ್ರಸ್ತಾಪಿಸುವ ಸಾಧ್ಯತೆಯಿದೆ. ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಹೆಚ್.ಡಿ.ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಹೈಕೋರ್ಟ್‌ನಲ್ಲಿ ವಾದ ಮಂಡಿಸುವುದಕ್ಕಾಗಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅವರನ್ನು ಎಸ್‌ಪಿಪಿಯನ್ನಾಗಿ ನೇಮಕ ಮಾಡಿ ಸರ್ಕಾರದ ಆದೇಶಿಸಿದ್ದು, ಈ ಅರ್ಜಿಗೆ ಸಂಬಂಧಿಸಿದಂತೆ ರವಿವರ್ಮ ಕುಮಾರ್ ಅವರು ಹೈಕೋರ್ಟ್‌ನಲ್ಲಿ ವಾದಿಸಲಿದ್ದಾರೆ.