ಬೆಂಗಳೂರು : ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ಏರಿಕೆ ಮಾಡಿರುವ ಪೆಟ್ರೋಲ್ ಡೀಸೆಲ್ ದರವನ್ನು ಕೂಡಲೇ ಕೈ ಬಿಡುವಂತೆ ಒತ್ತಾಯಿಸಿ ಬೆಂಗಳೂರು ಮಹಾನಗರ ಜನತಾದಳ ಜಾತ್ಯತೀತ ಪಕ್ಷದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕ್ನಲ್ಲಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು.
ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಹೆಚ್. ಎಂ. ರಮೇಶ್‌ಗೌಡ, ವಿಧಾನಪರಿಷತ್ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಟಿ.ಎ. ಶರವಣ, ಟಿ. ಎನ್. ಜವರಾಯಿಗೌಡ, ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ. ಪಿ. ರಂಗನಾಥ್ ಸೇರಿದಂತೆ ಹಲವು ನಾಯಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಫ್ರೀಡಂ ಪಾರ್ಕ್ನಿಂದ ಹೊರಟು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಈ ವೇಳೆ ವಿಧಾನಪರಿತ್ ಸದಸ್ಯ ಟಿ.ಎ. ಶರವಣ ಮಾತನಾಡಿ, ಗ್ಯಾರಂಟಿ ಕಾರಣಕ್ಕಾಗಿ ಸರ್ಕಾರ ದಿವಾಳಿಯಾಗಿದೆ ಎಂದು ಕಿಡಿಕಾರಿದರು. ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಬೆಲೆ ಹೆಚ್ಚಾದಾಗ ನಿವೇನು ಹೇಳಿದ್ರಿ. ಅಂದು ಬೆಲೆ ಹೆಚ್ಚಳ ಬಗ್ಗೆ ಮಾತನಾಡಿ ಇಂದು ತಾವೆ ಹೆಚ್ಚಿಸಿದ್ದೀರಿ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಬೆಲೆ ಏರಿಕೆ ಅನಿವಾರ್ಯ ಎಂದು ಗೃಹ ಸಚಿವರು ಹೇಳ್ತಾರೆ. ಪೆಟ್ರೋಲ್-ಡೀಸೆಲ್ ಮೇಲೆ ಹೆಚ್ಚಿಸಿರೊ ಸೆಸ್ ವಾಪಸ್ ಪಡಿಯಬೇಕು. ಇಲ್ಲದೇ ಇದ್ದರೆ, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡಮಟ್ಟದ ಪ್ರತಿಭಟನೆ ಮಾಡ್ತೇವೆ. ಸದನದ ಒಳಗೂ, ಹೊರಗೂ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ ಮಾತನಾಡಿ, ಸಿದ್ದರಾಮಯ್ಯನವರು ಬಿಜೆಪಿ ಸರ್ಕಾರ ವಿರುದ್ಧ ಬೆಲೆ ಏರಿಕೆ ಖಂಡಿಸಿ ಹೋರಾಟ ಮಾಡಿದ್ರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಡಿಸೇಲ್ ಬೆಲೆ 10 ದರ ಇಳಿಸುತ್ತದೆ ಅಂದಿದ್ರು. ಅದರೇ ಈಗ ಪೆಟ್ರೋಲ್ ಮೇಲೆ 3 ರೂ. ಡಿಸೇಲ್ ಮೇಲೆ ಮೂರೂವರೆ ರೂಪಾಯಿ ಹೆಚ್ಚು ಮಾಡಿದ್ದಾರೆ. ಇದೇನಾ ನೀವು ಸರ್ಕಾರ ಬಂದ ಮೇಲೆ ಕಡಿಮೆ ಮಾಡಿದ್ದು, ಹಿಂದೆ ಶವ ಯಾತ್ರೆ ಮಾಡಿ ಹೋರಾಡಿದವರು ಈಗ ಜನ ಸಾಮಾನ್ಯರಿಗೆ ದೊಡ್ಡ ಹೊರೆ ಮಾಡಿದ್ದಿರಾ. ಅಷ್ಟೇ ಅಲ್ಲದೆ ಸ್ಟ್ಯಾಂಪ್ ಡ್ಯೂಟಿ ಸೇರಿ ಸಾಕಷ್ಟು ತೆರಿಗೆ ಹೆಚ್ಚು ಮಾಡಿದ್ದಿರಾ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡದೆ ಇದ್ದರೆ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ಓದಿ: ಬೆಂಗಳೂರಿಗರಿಗೆ ಸದ್ಯದಲ್ಲೇ ನೀರಿನ ದರ ಏರಿಕೆ ಶಾಕ್; ಹೀಗಂದ್ರು ಡಿಸಿಎಂ ಡಿಕೆ ಶಿವಕುಮಾರ್ - DCM DK Shivakumar