ಮೈಸೂರು: ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಅಷ್ಟೇ. ನಮ್ಮ ತತ್ವ ಸಿದ್ಧಾಂತವೇ ಬೇರೆ, ಬಿಜೆಪಿ ತತ್ವ ಸಿದ್ಧಾಂತವೇ ಬೇರೆ. ನಮ್ಮ ತತ್ವ ಸಿದ್ಧಾಂತದಲ್ಲಿ ಒಂದು ಚೂರೂ ಕೂಡ ಬದಲಾಗುವುದಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಮೈಸೂರು ಜಿ.ಪಂ.ಕಚೇರಿಯಲ್ಲಿ ಇಂದು ನಡೆದ ಚಾಮುಂಡೇಶ್ವರಿ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದ ವೇಳೆ ಅವರು ಮಾಧ್ಯಮದವರ ಜೊತೆ ಮಾತನಾಡಿದರು.
ಕುಮಾರಸ್ವಾಮಿ ಕೇಸರಿ ಶಾಲು ಧರಿಸಿದ್ದು, ಅದು ಬಿಜೆಪಿ ಶಾಲು ಅಲ್ಲ. ಆಂಜನೇಯಸ್ವಾಮಿ ದೇವಾಲಯಕ್ಕೆ ಹೋಗಿದ್ದಾಗ ಒಬ್ಬ ಹುಡುಗ ಹಾಕಿದ್ದ ಶಾಲು ಅದು. ಅದನ್ನೇ ಕಾಂಗ್ರೆಸ್‌ನವರು ದೊಡ್ಡದು ಮಾಡಿದ್ದಾರೆ ಅಷ್ಟೇ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.
ದೆಹಲಿಗೆ ಹೋಗಿ ಪ್ರತಿಭಟಿಸುವುದು ಬೇಕಿರಲಿಲ್ಲ: ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವುದು ಸರಿಯಲ್ಲ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಾವು ಎಲ್ಲವನ್ನೂ ಕೊಟ್ಟಿದ್ದೇವೆ ಎನ್ನುತ್ತಾರೆ. ಆದರೆ ಏನೂ ಕೊಟ್ಟಿಲ್ಲ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಏನೇ ಇದ್ದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ರಾಜ್ಯ ಸರ್ಕಾರ ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಅದರ ಅಗತ್ಯವೂ ಇರಲಿಲ್ಲ ಎಂದು ಅವರು ಹೇಳಿದರು.
ಇದನ್ನೂಓದಿ: ಕಾಂಗ್ರೆಸ್ ದೆಹಲಿ ಪ್ರತಿಭಟನೆ ದೊಂಬರಾಟ: ಯಡಿಯೂರಪ್ಪ ಟೀಕೆ