ಬೆಂಗಳೂರು: ''ಯಾರೇ ತಪ್ಪು ಮಾಡಲಿ, ಅದು ನನ್ನ ಮಗ ಆಗಲಿ, ಅಣ್ಣ ತಮ್ಮ ಮಾಡಿದ್ದರು ತಪ್ಪು ತಪ್ಪೇ. ತಪ್ಪು ಮಾಡಿಲ್ಲ ಅಂತ ವಾದ ಮಾಡಲ್ಲ. ಮುಚ್ಚಿ ಹಾಕುವ ಪ್ರಯತ್ನ ಮಾಡಲ್ಲ, ಎಸ್‌ಐಟಿ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳೂ ಅವರ ಸರ್ಕಾರದ ಅಧೀನದಲ್ಲೇ ಇವೆ. ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ಬಗ್ಗೆ ಎಸ್ಐಟಿ ಮಾತ್ರವಲ್ಲ, ಯಾವುದೇ ರೀತಿಯ ತನಿಖೆಗೆ ವಹಿಸಿ ಕೈಗೊಂಡರೂ ಸ್ವಾಗತಿಸುವುದಾಗಿ'' ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಶೇಷಾದ್ರಿಪುರದಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ''ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ವಿಶೇಷ ತನಿಖಾದಳಕ್ಕೆ ವಹಿಸಿರುವುದನ್ನು ಸ್ವಾಗತಿಸುತ್ತೇನೆ. ಚುನಾವಣೆ ಸಂದರ್ಭದಲ್ಲಿ ಎದುರಾಳಿಗಳನ್ನು ಸೋಲಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತವೆ. ಅದರ ಭಾಗ ಇದೂ ಆಗಿರಬಹುದು. ಲೈಂಗಿಕ ದೌರ್ಜನ್ಯದ ಆರೋಪದ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಆದರೂ ರಾಜ್ಯ ಸರ್ಕಾರ ಎಸ್‌ಐಟಿಗೆ ವಹಿಸಿರುವುದನ್ನು ಸ್ವಾಗತಿಸುತ್ತೇವೆ. ಆರೋಪಕ್ಕೆ ಸಂಬಂಧಿಸಿದಂತೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ'' ಎಂದು ಹೇಳಿದರು.
''ಪೆನ್‌ಡ್ರೈವ್ ವಿಚಾರ ಅಥವಾ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿರುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ತಾವು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದು, ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಕಾಂಗ್ರೆಸ್‌ನವರು ಈ ವಿಚಾರದಲ್ಲಿ ಪ್ರತಿಭಟನೆ ಮಾಡಿರುವುದು ಗಮನಕ್ಕೆ ಬಂದಿದೆ. ಸರ್ಕಾರವೂ ಅವರದ್ದೇ ಆಗಿದೆ, ಎಸ್‌ಐಟಿ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳೂ ಅವರ ಸರ್ಕಾರದ ಅಧೀನದಲ್ಲೇ ಇವೆ. ಹಾಗಾಗಿ ಯಾವುದೇ ರೀತಿಯ ತನಿಖೆ ನಡೆಸಲು ಕ್ರಮ ಕೈಗೊಂಡರೂ ಸ್ವಾಗತಿಸುತ್ತೇನೆ'' ಎಂದು ತಿಳಿಸಿದರು.
ಹೆಚ್ಡಿಕೆ ಪೆನ್‌ಡ್ರೈವ್ ನಲ್ಲಿ ಏನಿದೆ ಎಂಬ ವಿಚಾರ ಈಗ ಗೊತ್ತಾಯಿತು ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ವ್ಯಂಗ್ಯವಾಡಿದ ಕುರಿತು ಪ್ರತಿಕ್ರಿಯಿಸಿ, ''ಅವರಿಗೆ ಬೇರೆ ಏನು ಹೇಳೋಕೆ ಆಗಲ್ಲ, ಅದಕ್ಕೆ ಹೇಳಿದ್ದಾರೆ. ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ತಾರೆ, ಶಿಕ್ಷೆಗೆ ಒಳಪಡಿಸುತ್ತಾರೆ'' ಎಂದರು.
''ಕೇಂದ್ರ ಸರ್ಕಾರದ ಜೊತೆ ಸಂಘರ್ಷ ಒಳ್ಳೆಯದಲ್ಲ, ಯಡಿಯೂರಪ್ಪ ಅವರ ಸರ್ಕಾರದ ವೇಳೆ ಮಳೆ ಜಾಸ್ತಿಯಾಗಿ ಸಾಕಷ್ಟು ಹಾನಿಯಾಗಿತ್ತು. ಆಗ ಸಂತ್ರಸ್ತರಿಗೆ ಮನೆ ನಿರ್ಮಾಣ ಸೇರಿದಂತೆ ಪರಿಹಾರ ನೀಡಲಾಗಿತ್ತು. ನಮ್ಮ ರಾಜ್ಯದಲ್ಲಿ ಬರ ಪರಿಹಾರ ಬಂದ ಮೇಲೆ ರೈತರ ಖಾತೆಗೆ 2 ಸಾವಿರ ಕೊಡ್ತೀವಿ ಅಂದರು. ಆದರೆ ಬರ ಪರಿಹಾರ ನೀಡಿಲ್ಲ, ಬರ ಪರಿಹಾರ ಕಾಮಗಾರಿಗಳು ರಾಜ್ಯದ ಎಲ್ಲಿಯೂ ನಡೆದಿಲ್ಲ. ಕೇಂದ್ರ ಸರ್ಕಾರ ನೀಡಿದ 600 ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಬಳಿಸಿದ್ದೀರಾ?. ಗೋ ಸಂರಕ್ಷಣೆ, ಕುಡಿಯುವ ನೀರಿಗೆ ಏನು ಮಾಡದ ಸರ್ಕಾರ ಅಂದರೆ ಅದು ಕಾಂಗ್ರೆಸ್ ಸರ್ಕಾರ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಸುದೀರ್ಘ ಸರ್ಕಾರ ನಡೆಸಿರುವ ಸಿದ್ದರಾಮಯ್ಯಗೆ ಒಕ್ಕೂಟದ ವ್ಯವಸ್ಥೆ ಗೊತ್ತಿದೆ. ಬರಗಾಲಕ್ಕೆ ಹಣ ಖರ್ಚೇ ಮಾಡದೆ ಸುಪ್ರೀಂಕೋರ್ಟ್ ಗೆ ಹೋಗಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ದಾಳಿ ಮಾಡ್ತಾ ಇರೋದು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ'' ಎಂದು ಹೇಳಿದರು.
''26 ರಂದು ಕರ್ನಾಟಕ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಮಾಡಿದ ಎಲ್ಲಾ ಮತದಾರರಿಗೆ, ಸಹಕಾರ ನೀಡಿದ ಬಿಜೆಪಿ ಪಕ್ಷದ ನಾಯಕರಿಗೆ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷನಾಗಿ ಅಭಿನಂದನೆ ಸಲ್ಲಿಸುತ್ತೇನೆ. ಮೇ 7 ರಂದು ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಚುನಾವಣಾ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಎಲ್ಲಾ ಜೆಡಿಎಸ್ ಮುಖಂಡರು ಮಾಜಿ ಹಾಲಿ ಶಾಸಕರ ಸಭೆಯನ್ನ ದಿನಾಂಕ 30 ರಂದು ಕರೆಯಲಾಗಿದೆ. ಅಂದು ಕೋರ್ ಕಮಿಟಿ ಸಭೆ ಇದೆ. ಆ ಸಭೆಯಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರು ಭಾಗಿಯಾಗ್ತಾರೆ. 14 ಲೋಕಸಭಾ ಕ್ಷೇತ್ರದ ಎಲ್ಲ ನಾಯಕರುಗಳು ಸಭೆಗೆ ಆಗಮಿಸಲಿದ್ದಾರೆ'' ಎಂದರು.
''ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ, ಲೋಕಸಭಾ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದ್ದಾರೆ. ಎಲ್ಲ ರೀತಿಯ ಪ್ರಭಾವ ಮಾಡಿದ್ದಾರೆ ಎಲ್ಲ ರೀತಿಯ ದುರ್ಬಳಕೆ ಮಾಡಿದ್ದಾರೆ. ಆದರೂ ಬಿಜೆಪಿ ಜೆಡಿಎಸ್ ಮೈತ್ರಿಯೇ ಹೆಚ್ಚು ಗೆಲ್ಲುವುದು, ಒಂದು ಎರಡು ಕಡೆ ಸ್ವಲ್ಪ ಹಿನ್ನಡೆಯಾಗಬಹುದು ಆದರೂ 14 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಪ್ರಕರಣ: ವಿಶೇಷ ತನಿಖಾ ತಂಡ ರಚಿಸಿ ರಾಜ್ಯ ಸರ್ಕಾರ ಆದೇಶ - Hassan Video Case