ಬೆಂಗಳೂರು: ಪೆನ್ ಡ್ರೈವ್ ಹಂಚಿಕೆ ಪ್ರಕರಣಗಳ ತನಿಖೆ ಹಾಗೂ ಎಸ್ಐಟಿ ತನಿಖೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ದೂರು ನೀಡಿದೆ. ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ನಿಯೋಗವು ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರಿನ ಮನವಿ ಸಲ್ಲಿಕೆ ಮಾಡಿತು.
ಎಸ್ಐಟಿಯು ಸರ್ಕಾರ ಹೇಳಿದಂತೆ ತನಿಖೆ ಮಾಡುತ್ತಿದೆ. ಪೆನ್ ಡ್ರೈವ್ ಹಂಚಿಕೆ ಬಗ್ಗೆ ನಿಷ್ಪಕ್ಷವಾದ ತನಿಖೆ ನಡೆಸಬೇಕು ಎಂದು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಲಾಗಿದೆ. ಲೋಕಸಭಾ ಚುನಾವಣಾ ಪ್ರಚಾರದ ವೇಳೆ ವಿಡಿಯೋಗಳ ಬಗ್ಗೆ ಪ್ರಸ್ತಾಪಿಸಿದ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಮತ್ತು ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ವಿಡಿಯೋಗಳ ಬಗ್ಗೆ ಗೊತ್ತಿದ್ದರೂ ಪ್ರಜ್ವಲ್ ರೇವಣ್ಣನವರಿಗೆ ವಿದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟರು. ಇಂತಹ ಹೇಳಿಕೆಗಳು ಪ್ರಧಾನಿ ಮತ್ತು ಗೃಹ ಸಚಿವರ ಪ್ರತಿಷ್ಠೆಗೆ ಮಸಿ ಬಳಿಯಲು ರಾಜಕೀಯ ಪ್ರೇರಿತವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಶೇಷ ತನಿಖಾ ತಂಡಗಳಿಂದ ಮುಕ್ತ ಮತ್ತು ನ್ಯಾಯೋಚಿತ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಿರೀಕ್ಷಿಸುವುದು ಅಸಾಧ್ಯವಾಗಿದೆ. ಎಸ್ಐಟಿ ತಂಡವು ರಾಜ್ಯ ಸರ್ಕಾರದಿಂದ ಪ್ರಭಾವಿತವಾಗಿದೆ ಮತ್ತು ತಪ್ಪಾಗಿ ಮಾರ್ಗದರ್ಶನ ನೀಡುತ್ತದೆ. ಆದ್ದರಿಂದ, ಕೇಂದ್ರೀಯ ತನಿಖಾ ದಳ (ಸಿಬಿಐ) ದಿಂದ ಸಂಪೂರ್ಣ ತನಿಖೆಗಾಗಿ ಪ್ರಕರಣವನ್ನು ಶಿಫಾರಸು ಮಾಡುವಲ್ಲಿ ತಾವು ಮಧ್ಯಸ್ಥಿಕೆಯನ್ನು ವಹಿಸಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.
''ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಸಂಭಾಷಣೆಯು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ನ ಇಮೇಜ್ ಅನ್ನು ಹಾಳು ಮಾಡಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಂದಾಗಿರುವಂತಿದೆ. ಹಾಸನ ಜಿಲ್ಲೆಯ ಬಸ್, ಪಾರ್ಕ್ ಮತ್ತಿತರ ಸಾರ್ವಜನಿಕರ ಸ್ಥಳಗಳಲ್ಲಿ 25 ಸಾವಿರಕ್ಕೂ ಹೆಚ್ಚು ಪೆನ್ ಡ್ರೈವ್ ವಿತರಿಸಿರುವುದರ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡವಿದೆ. ಶಿವಕುಮಾರ್ ಮಾಸ್ಟರ್ ಮೈಂಡ್ ಆಗಿರುವುದರಿಂದ ಅವರನ್ನು ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿಗಳಿಗೆ ಸಲಹೆ ನೀಡುವಂತೆ'' ಮನವಿ ಮಾಡಲಾಗಿದೆ.
''ಎಸ್ಐಟಿ ನಡೆಸಿದ ತನಿಖೆಯು ಪಕ್ಷಪಾತವಾಗಿದೆ. ಭಾಗಶಃ ಮತ್ತು ಪಾರದರ್ಶಕವಾಗಿಲ್ಲ. ಸಂತ್ರಸ್ತರಿಗೆ ದೂರು ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಸಾಕಷ್ಟು ಸಂಕಟ, ದುಃಖ ಮತ್ತು ಅವಮಾನವನ್ನು ಉಂಟು ಮಾಡುವ ವಿಡಿಯೋಗಳ ಪ್ರಸಾರವನ್ನು ನಿಲ್ಲಿಸಲು ರಾಜ್ಯ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಅಂತಹ ವಿಡಿಯೋ ಹೊಂದಿರುವ ಹಾಗೂ ಪ್ರಸಾರ ಮಾಡುವ ಎಲ್ಲ ಸಂಬಂಧಿತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾಗಿದೆ. ವಿಡಿಯೋ ಹಂಚಿಕೆ ಮಾಡಿರುವ ಕಾರ್ತಿಕ್ ಗೌಡ, ನವೀನ್ ಗೌಡ ಸೇರಿದಂತೆ ಹಲವರ ವಿರುದ್ಧ ಎಸ್ಐಟಿ ಕ್ರಮ ಕೈಗೊಂಡಿಲ್ಲ'' ಎಂದು ರಾಜ್ಯಪಾಲರಿಗೆ ಜೆಡಿಎಸ್ ನೀಡಿರುವ ದೂರಿನಲ್ಲಿ ಉ್ಲಲೇಖಿಸಲಾಗಿದೆ.
ಇದನ್ನೂ ಓದಿ: ಪೆನ್ ಡ್ರೈವ್ ಪ್ರಕರಣ: ಶಿಕ್ಷೆ ಕೊಡಿಸುವ ಬದಲು ಪ್ರಚಾರ ಮಾಡಲಾಗುತ್ತಿದೆ; ಕುಮಾರಸ್ವಾಮಿ ಕಿಡಿ - H D Kumaraswamy