ಬೆಂಗಳೂರು: ''ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಔಪಚಾರಿಕವಾಗಿ ಮಾತನಾಡಲು ನನ್ನನ್ನು ದೆಹಲಿಗೆ ಕರೆದಿದ್ದರು. ಇದರಿಂದ ನಿನ್ನೆ (ಗುರುವಾರ) ದೆಹಲಿಗೆ ತೆರಳಿದ್ದೆ. ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಇಂದು (ಶುಕ್ರವಾರ) ಮರಳಿದ್ದೇನೆ. ಅಮಿತ್ ಶಾ ಜೊತೆಗೆ ಯಾವೆಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂಬುದನ್ನು ಎರಡರಿಂದ ಮೂರು ದಿನಗಳ ನಂತರ ಬಹಿರಂಗ ಮಾಡುತ್ತೇನೆ'' ಎಂದು ಶಾಸಕ ಜೆ. ಜನಾರ್ದನ ರೆಡ್ಡಿ ಹೇಳಿದರು.
ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನನ್ನ ಪತ್ನಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವುದನ್ನು ಹಿಂದೆ ಕೂಡ ತಿಳಿಸಿದ್ದೆ, ಈಗಲೂ ಕೂಡ ಅದನ್ನೇ ಹೇಳುತ್ತೇನೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಮಿತ್ ಶಾ ಜನಾರ್ದನ ರೆಡ್ಡಿ ಭೇಟಿ: ಬಿಜೆಪಿಯ 2ನೇ ಪಟ್ಟಿಯಲ್ಲಿ ಬಿಜೆಪಿಯ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಕೈತಪ್ಪಿದ್ದು, ಅದರ ಬೆನ್ನಲ್ಲೇ ಇದೀಗ ಶಾಸಕ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜನಾರ್ದನ ರೆಡ್ಡಿ ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿಯ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಶಾಸಕ ರೆಡ್ಡಿ, ಅಮಿತ್ ಶಾ ಅವರನ್ನು ಭೇಟಿಯಾಗಿರುವ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಶಾಸಕ ಜನಾರ್ದನ ರೆಡ್ಡಿ, "ಕೇಂದ್ರ ಸರ್ಕಾರದ ಗೃಹಮಂತ್ರಿ ಅಮಿತ್ ಶಾ ಅವರ ಆಹ್ವಾನದ ಮೇರೆಗೆ ದೆಹಲಿಯಲ್ಲಿ ಮಾರ್ಚ್ 14 ರಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷನಾಗಿ ಭೇಟಿ ಮಾಡಿ, ಕರ್ನಾಟಕ ರಾಜ್ಯದ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ" ಎಂದು ಬರೆದಿದ್ದರು.
ಎರಡರಿಂದ ಮೂರು ತಿಂಗಳ ಹಿಂದೆ ಬಿಜೆಪಿ ಪರ ಒಲವು ವ್ಯಕ್ತಪಡಿಸಿದ್ದ ಶಾಸಕ ರೆಡ್ಡಿ ಅವರು, ''ಬಿಜೆಪಿಗರು ಮುಂದೆ ಬಂದಲ್ಲಿ ಮೈತ್ರಿ ಮಾಡಿಕೊಂಡು ಬೆಂಬಲ ನೀಡುವುದಾಗಿ ತಿಳಿಸಿದ್ದರು. ಆದ್ರೆ, ಇದಕ್ಕೆ ಬಿಜೆಪಿಗರಿಂದ ಸರಿಯಾದ ಸ್ಪಂದನೆ ದೊರೆತಿರಲಿಲ್ಲ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದ ರೆಡ್ಡಿ ಅವರು, ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದ್ದಾಗಿ ತಿಳಿಸಿದ್ದರು. ಇದೀಗ ಅಮಿತ್ ಶಾ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿದೆ.
ಕೊಪ್ಪಳ, ಗದಗ ಸೇರಿದಂತೆ ರಾಜ್ಯದ ಎಂಟರಿಂದ ಹತ್ತು ಲೋಕಸಭಾ ಕ್ಷೇತ್ರಗಳಲ್ಲಿ ಕೆಆರ್ಪಿಯಿಂದ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಪ್ರಾರಂಭದಿಂದಲೂ ಹೇಳಿಕೊಂಡು ಬಂದಿದ್ದ ರೆಡ್ಡಿ ಅವರು, ಇದುವರೆಗೂ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ. ಇದರ ಮಧ್ಯೆ ಶಾ ಅವರನ್ನು ಭೇಟಿ ಮಾಡಿರುವುದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ರಾಜಕೀಯದ ಸವಾಲುಗಳನ್ನು ಅರಿತುಕೊಂಡೇ ಬಂದಿದ್ದೇನೆ: ಯದುವೀರ್ ಒಡೆಯರ್