ಬಳ್ಳಾರಿ: ಸಂಡೂರು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಅವರನ್ನು ಘೋಷಿಸಿದ ಹಿನ್ನೆಲೆ ಮಾಜಿ ಸಚಿವ ಶ್ರೀರಾಮುಲು ಮತ್ತು ಶಾಸಕ ಜನಾರ್ದನ ರೆಡ್ಡಿ ನಗರದಲ್ಲಿ ಜಂಟಿ ಮಾಧ್ಯಮಗೋಷ್ಟಿ ನಡೆಸಿದರು.
ಇಂದಿನಿಂದ ಒಂದು ದಿನವನ್ನೂ ನಾವು ವ್ಯರ್ಥ ಮಾಡಲ್ಲ. ನಾವು ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಬಿಜೆಪಿ ಯಾವ ರೀತಿ ಶಕ್ತಿಶಾಲಿಯಾಗಿತ್ತೋ ಹಾಗೇ ಒಗ್ಗಟ್ಟಾಗಿ ಕೆಲಸ ಮಾಡ್ತೇವೆ. ಇಂದಿನಿಂದಲೇ ನಾವು ಪ್ರಚಾರ ಕಾರ್ಯ ಆರಂಭಿಸುತ್ತೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ. ಭ್ರಷ್ಟಾಚಾರ, ಅತ್ಯಾಚಾರ, ಭೂ ಕಬಳಿಕೆಯನ್ನ ಜನರು ನೋಡಿದ್ದಾರೆ. ನಮ್ಮ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಗೆಲ್ಲಿಸುವ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನ ಗಟ್ಟಿಯಾಗಿ ಕಟ್ಟುತ್ತೇವೆ ಎಂದು ಮಾಜಿ ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ದಿವಾಕರ್ ಕೂಡಾ ಪ್ರಬಲ ಆಕಾಂಕ್ಷಿ ಆಗಿದ್ದರು. ಇದು ಪಾರ್ಟಿ ತೀರ್ಮಾನ. ಹನುಮಂತು ಗೆಲುವು, ಪಕ್ಷದ ಗೆಲುವಾಗಲಿದೆ. ಬಿಜೆಪಿ ಸಂಡೂರಿನಲ್ಲಿ ಗೆಲ್ಲಬೇಕು ಅನ್ನೋ ವಿಶ್ವಾಸದಿಂದ ಕೆಲಸ ಮಾಡುತ್ತೇವೆ. ವಾಲ್ಮೀಕಿ ಹಣ ಬಳಕೆ ಮಾಡಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮಾಜಿ ಸಚಿವ ನಾಗೇಂದ್ರನ ರೋಷಾವೇಷ ನೋಡಿದ್ರೆ ನಗುಬರುತ್ತೆ ಎಂದು ವ್ಯಂಗ್ಯವಾಡಿದರು.
ಪಕ್ಷದ ಹಿರಿಯರ ಆದೇಶದಂತೆ ಸಂಡೂರಿನಲ್ಲಿ ಮನೆ ಮಾಡಿದ್ದೇನೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸಭೆ ಮಾಡ್ತಿದ್ದೇನೆ. ಈ ಬಾರಿ ಬಿಜೆಪಿ ಗೆಲ್ಲಲೇಬೇಕು ಅಂತ ಪಣ ತೊಟ್ಟಿದ್ದಾರೆ. ತುಕಾರಾಂ ನಾಲ್ಕು ಬಾರಿ ಶಾಸಕರಾದ್ರೂ ಏನೂ ಅಭಿವೃದ್ಧಿ ಮಾಡಿಲ್ಲ. ನಾನು ಮಾಡಿರುವ ರಸ್ತೆಗಳೇ ಇದುವರೆಗೂ ಇವೆ. ನಾವು ಅಧಿಕಾರಕ್ಕೆ ಬಂದ್ರೆ ದೊಡ್ಡಮಟ್ಟದ ಅಭಿವೃದ್ಧಿ ನಿರೀಕ್ಷೆ ಮಾಡಬಹುದು. ಬಂಗಾರು ಹನುಮಂತು ದೊಡ್ಡ ಅಂತರದಿಂದ ಗೆಲ್ಲಲ್ಲಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ, ಯಾರಿಗೆ ಬೇಕೋ ಅವರಿಗೆ ಟಿಕೆಟ್ ಘೋಷಣೆ ಮಾಡಿಕೊಳ್ತಾರೆ : ಬಿಎಸ್ವೈ