ಕಾರವಾರ: "ಗೋವಾದಿಂದ ನಾನು ಧಾರವಾಡಕ್ಕೆ ತೆರಳುತ್ತಿದ್ದೆ. ಲಾರಿ ಚಲಾಯಿಸುವಾಗಲೇ ಜೋರಾಗಿ ಶಬ್ದ ಬಂದಿತು. ಸ್ವಲ್ಪ ಸಮಯದಲ್ಲಿಯೇ ನಾನಿದ್ದ ಸೇತುವೆ ಕುಸಿಯಿತು. ಲಾರಿ ನದಿಗೆ ಬಿದ್ದಾಗ ನನ್ನ ಜೀವ ಹೋಯಿತು ಅಂದುಕೊಂಡೆ. ಲಾರಿ ಮುಂದಿನ ಗಾಜು ಒಡೆದಿದ್ದರಿಂದ ಲಾರಿ ಮೇಲೆ ಬಂದು ಹತ್ತಿ ಕುಳಿತಿದ್ದೆ. ಅಷ್ಟರಲ್ಲಿ ಬೋಟ್ನಲ್ಲಿ ಬಂದವರು ನನ್ನನ್ನು ರಕ್ಷಣೆ ಮಾಡಿದರು. ನಾನು ಬದುಕುಳಿದಿದ್ದೇ ಪವಾಡ ಅನಿಸುತ್ತಿದೆ" ಎಂದು ಲಾರಿ ಚಾಲಕ ಬಾಲಮುರುಗನ್ ಹೇಳಿದ್ದಾರೆ.
ಬುಧವಾರ ಮಧ್ಯಾಹ್ನ 12.50ರ ವೇಳೆಗೆ ಕಾಳಿ ಸೇತುವೆ ಕುಸಿದು ಬಿದ್ದು, ತಮಿಳುನಾಡಿನ ಬಾಲಮುರುಗನ್ ಎನ್ನುವ ಚಾಲಕ ಲಾರಿ ಸಮೇತ ನದಿಗೆ ಬಿದ್ದಿದ್ದರು. ನದಿಗೆ ಬಿದ್ದ ಟ್ರಕ್ ಡ್ರೈವರ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ತಮ್ಮ ಸಮಯಪ್ರಜ್ಞೆಯಿಂದ ಕಾಪಾಡಿದ್ದರು.
ಕಾವಲು ಪಡೆ ಕಾರ್ಯಕ್ಕೆ ಮೆಚ್ಚುಗೆ: ವಿಷಯ ತಿಳಿಯುತ್ತಿದ್ದಂತೆ ಕರಾವಳಿ ಕಾವಲು ಪಡೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಅದೇ ವೇಳೆ ದೇವಭಾಗ್ನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಬೋಟ್ ವೊಂದರ ಸಹಾಯ ಕೇಳಿದ್ದರು. ನದಿಯಲ್ಲಿ ಮುಳುಗಿದ್ದ ಲಾರಿಯ ತುದಿಯಲ್ಲಿ ಕುಳಿತಿದ್ದ ಮುರುಗನ್ ಅವರನ್ನು ಗಮನಿಸಿ ತಕ್ಷಣ ಸ್ಥಳಕ್ಕೆ ಹೋಗಿ ಲೈಫ್ ಜಾಕೆಟ್ ನೀಡಿ ರಕ್ಷಣೆ ಮಾಡಿ, ಆಸ್ಪತ್ರೆಗೆ ಸಾಗಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಅಶೋಕ್ ದುರ್ಗೆಕರ್, ಸುದರ್ಶನ್ ತಾಂಡೇಲ, ಮೀನುಗಾರರಾದ ಸುರಜ, ಕರಣ ರಾಜೇಂದ್ರ, ಸುದೇಶ, ಲಕ್ಷ್ಮಿಕಾಂತ, ದಿಲೀಪ್ ಪಾಲ್ಗೊಂಡಿದ್ದು, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ವಾಹನಗಳ ತಡೆದು ಅವಘಡ ತಪ್ಪಿಸಿದ ಪೊಲೀಸ್: ಸೇತುವೆ ಬಳಿ ದೊಡ್ಡ ಶಬ್ದ ಬಂದಿದ್ದು, ಸೇತುವೆ ಬಿದ್ದಿರಬಹುದು ಎಂದು ಚಿತ್ತಾಕುಲ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ವಿನಯ್ ಕಾಣಕೋಣಕರ್ ಎಂಬುವವರಿಗೆ ಸ್ಥಳೀಯರೊಬ್ಬರು ಕರೆ ಮಾಡಿ ಮಾಹಿತಿ ನೀಡಿದರು. ಅದರಂತೆ ಸ್ಥಳಕ್ಕೆ ಆಗಮಿಸುತ್ತಿದ್ದ ವೇಳೆ ಎದುರುಗಡೆ ತೆರಳುತ್ತಿದ್ದ ಲಾರಿಗಳನ್ನು ಬೈಕ್ ಮೂಲಕ ಓವರ್ ಟೇಕ್ ಮಾಡಿ ಬೈಕ್ ಅಡ್ಡಹಾಕಿ ವಾಪಸ್ಸ್ ತೆರಳುವಂತೆ ಸೂಚಿಸಿದರು. ಬಳಿಕ ಪಿಎಸ್‌ಐ ಮಾಂತೇಶ, ಡಿವೈಎಸ್ಪಿ ಗಿರೀಶ್ ಅವರಿಗೆ, ಠಾಣೆಗೆ, ಅಗ್ನಿಶಾಮಕಕ್ಕೆ ಮಾಹಿತಿ ನೀಡಿ ಎಲ್ಲರೂ ಕಾರ್ಯ ಪ್ರವೃತ್ತರಾಗುವಂತೆ ಮಾಡಿದರು.
ನಂತರ ಪಿಎಸ್‌ಐ ಮಹಾಂತೇಶ ಅವರು ಕರಾವಳಿ ಕಾವಲುಪಡೆ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಕರಾವಳಿ ಕಾವಲುಪಡೆ ಇನ್ಸ್ಪೆಕ್ಟರ್ ನಿಶ್ಚಲ್ ಕುಮಾರ್ ಸ್ಥಳೀಯ ಮೀನುಗಾರರನ್ನು ಕರೆದುಕೊಂಡು ನದಿಯಲ್ಲಿ ಹುಡುಕಾಟಕ್ಕೆ ಮುಂದಾದಾಗ ಚಾಲಕ ರಕ್ಷಣೆಗೆಗಾಗಿ ಕಾಯುತ್ತಿರುವುದು ಗೊತ್ತಾಗಿದೆ. ಬಳಿಕ ಆತನನ್ನು ಮೀನುಗಾರರ ಬೋಟ್ ಮೂಲಕ ತೆರಳಿ ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಸ್ಪಿ ಎಂ.ನಾರಾಯಣ ಅವರು ಮಾಹಿತಿ ನೀಡಿದ್ದು, ಸಚಿವ ಮಂಕಾಳ ವೈದ್ಯ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಚಾಲಕನಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಸಚಿವ: ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಚಾಲಕ ಬಾಲ ಮುರುಗನ್ ಆರೋಗ್ಯ ವಿಚಾರಿಸಿದರು. ಚಾಲಕನ ಬಡತನ ಗಮನಿಸಿದ ಸಚಿವರು ಆತನಿಗೆ ವೈಯಕ್ತಿಯವಾಗಿ 50 ಸಾವಿರ ರೂಪಾಯಿ ಹಣವನ್ನು ನೀಡಿ ಹೊಸ ಬಟ್ಟೆ ತೆಗೆದುಕೊಂಡು, ಚಿಕಿತ್ಸೆ ಪಡೆದು ಗುಣಮುಖವಾದ ನಂತರ ಮನೆಗೆ ತೆರಳುವಂತೆ ತಿಳಿಸಿದರು.
ಇದನ್ನೂ ಓದಿ: ಕಾರವಾರ: ಕುಸಿದು ಬಿದ್ದ ಕಾಳಿ ನದಿ ಸೇತುವೆ ನೋಡಲು ಜನದಟ್ಟಣೆ; ಹೈರಾಣಾದ ಪೊಲೀಸರು - Kali River Bridge Collapse