ಬೆಂಗಳೂರು: "ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ರಾಜ್ಯದ ನಿಲುವು ಪ್ರಕಟಿಸುವ ಬಗ್ಗೆ ಕ್ಯಾಬಿನೆಟ್ನಲ್ಲಿ ಯಾವುದೇ ಚರ್ಚೆಯಾಗಿಲ್ಲ. ಆದರೆ ವೈಯಕ್ತಿಕವಾಗಿ ಹೇಳುವುದಾದರೆ ತಮಿಳು ಹಿಂದೂ ಸಂತ್ರಸ್ತರನ್ನು ಕಾಯ್ದೆಯಿಂದ ಹೊರಗಿಟ್ಟಿರುವುದು ಸರಿಯಲ್ಲ" ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, "ನೆರೆಯ ದೇಶಗಳಿಂದ ಬಂದವರಿಗೆ ಕಾಯ್ದೆಯಡಿ ಪೌರತ್ವ ನೀಡಲಾಗುತ್ತದೆ. ಆದರೆ ಶ್ರೀಲಂಕಾವನ್ನು ಕಾಯ್ದೆಯಿಂದ ಹೊರಗಿಡಲಾಗಿದೆ. ವಾಸ್ತವವಾಗಿ ಎಲ್‌ಟಿಟಿಇ ಹಾಗೂ ಶ್ರೀಲಂಕಾ ನಡುವಿನ ಸಂಘರ್ಷದಲ್ಲಿ ಅಲ್ಲಿಗೆ ಹೊಟ್ಟೆಪಾಡಿಗಾಗಿ ಹೋಗಿದ್ದ ತಮಿಳರು ಸಂತ್ರಸ್ತರಾಗಿದ್ದರು. ಸಂಘರ್ಷದಿಂದ ವಾಪಸ್ಸು ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವು ಕಡೆ ಬಂದು ನೆಲೆಸಿರುವ ತಮಿಳು ಹಿಂದೂಗಳಿಗೆ ಈ ಕಾಯ್ದೆಯಿಂದ ಯಾವುದೇ ನೆರವಾಗುವುದಿಲ್ಲ. ನನ್ನ ಪ್ರಕಾರ ಎಲ್ಲಾ ರೀತಿಯಲ್ಲೂ ಅತಿ ಹೆಚ್ಚು ಶೋಷಣೆಗೆ ಒಳಗಾದವರು ಅವರು. ಕೇಂದ್ರ ಸರ್ಕಾರ ತಮಿಳು ಹಿಂದೂಗಳನ್ನು ಇದರಿಂದ ಹೊರಗಿಟ್ಟಿದೆ ಏಕೆ?" ಎಂದು ಪ್ರಶ್ನಿಸಿದರು.
"ಎಲ್‌ಟಿಟಿಇ ಉಗ್ರರಿಗಾಗಲಿ ಅಥವಾ ಶ್ರೀಲಂಕಾಗೆ ಆಗಲಿ ನನ್ನ ಬೆಂಬಲ ಇಲ್ಲ. ಆದರೆ ಇವರ ಸಂಘರ್ಷದಲ್ಲಿ ಯಾವುದೇ ತಪ್ಪಿಲ್ಲದ ಅಮಾಯಕರು ಬಲಿಯಾಗಿದ್ದಾರೆ. ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರೆಲ್ಲರೂ ಕೆಲಸಕ್ಕಾಗಿ ಶ್ರೀಲಂಕಾಗೆ ಹೋಗಿದ್ದವರು. ಇದೀಗ ಅಲ್ಲಿ ನೆಲೆ ಕಳೆದುಕೊಂಡು ವಾಪಸ್ಸು ಬಂದಿರುವ, ಅನಧಿಕೃತವಾಗಿ ನೆಲೆಸಿರುವ ಹಿಂದೂ ತಮಿಳರಿಗೆ ಈ ಪೌರತ್ವ ತಿದ್ದುಪಡಿ ಕಾಯ್ದೆ ನೆರವಾಗುವುದಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಸಿಎಎ ಜಾರಿಯು ಬಿಜೆಪಿಯ ಚುನಾವಣಾ ಗಿಮಿಕ್: ಸಿಎಂ ಸಿದ್ದರಾಮಯ್ಯ