ಬೆಂಗಳೂರು: ಉದ್ಯೋಗದಾತ ಸಂಸ್ಥೆಯು ತನ್ನ ಸಿಬ್ಬಂದಿಗೆ ಪಾವತಿಸಬೇಕಾದ ಭವಿಷ್ಯನಿಧಿ ಮೊತ್ತವನ್ನು ಸಿಬ್ಬಂದಿಯ ವೇತನದೊಂದಿಗೆ ಸೇರಿಸಿ ಪಾವತಿಸಿದಲ್ಲಿ ಅದು ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ದಾಸರಹಳ್ಳಿ ಶಾಸಕ ಮುನಿರಾಜು ಅವರ ಮಗಳು ಸ್ವಪ್ನ ಅವರು ಕಾರ್ಯದರ್ಶಿಯಾಗಿರುವ ಶ್ರೀಬಾಲಾಜಿ ಚಾರಿಟೇಬಲ್ ಟ್ರಸ್ಟ್ ಮತ್ತು ಸಂಸ್ಥಾಪಕ ಟ್ರಸ್ಟಿ ಬಿ.ಆರ್. ರಮೇಶ್ ವಿರುದ್ಧ ದಾಖಲಾಗಿದ್ದ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ. ಅಲ್ಲದೆ, ಸಿಬ್ಬಂದಿಯ ವೇತನದಿಂದ ಭವಿಷ್ಯ ನಿಧಿ ಮೊತ್ತವನ್ನು ಕಡಿತಗೊಳಿಸಿ ಭವಿಷ್ಯ ನಿಧಿ ಸಂಸ್ಥೆಗೆ ಪಾವತಿ ಮಾಡದಿದ್ದಲ್ಲಿ ಅಪರಾಧವಾಗಲಿದೆ ಎಂದು ತಿಳಿಸಿದೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರ ಸಿಬ್ಬಂದಿಯ ಭವಿಷ್ಯ ನಿಧಿ ಮೊತ್ತವನ್ನು ಸಿಬ್ಬಂದಿ ವೇತನದಲ್ಲಿ ಪಾವತಿಸಿದ್ದು, ಯಾವುದೇ ಮೊತ್ತವನ್ನು ತಮ್ಮಲ್ಲಿ ಉಳಿಸಿಕೊಂಡಿಲ್ಲ. ಅದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧ ನಂಬಿಕೆ ದ್ರೋಹದ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.
ಆದರೂ, ಸಿಬ್ಬಂದಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ದಂಡವಾಗಿ ಪಾವತಿ ಮಾಡಲಾಗಿದೆ. ದಾಖಲೆಗಳ ಪ್ರಕಾರ ಎಲ್ಲ ಮೊತ್ತ ಪಾವತಿಸಿದ ಬಳಿಕ ತನಿಖೆ ಮುಂದುವರೆಯುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಬಾಲಾಜಿ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ ಹಾಗೂ ಕಾರ್ಯದರ್ಶಿಗಳಾಗಿದ್ದಾರೆ. ಟ್ರಸ್ಟ್ ವತಿಯಿಂದ ರೈನ್ಬೋ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ರೈನ್ಬೋ ಪದವಿಪೂರ್ವ ಕಾಲೇಜು ನಡೆಸುತ್ತಿದ್ದಾರೆ. 2014ರ ಜೂನ್ ತಿಂಗಳಿನಿಂದ 2015ರ ಜನವರಿ ತಿಂಗಳವರೆಗೂ ಬಾಕಿ ಉಳಿಸಿಕೊಂಡಿದ್ದ ಶಾಲೆಯ ಸಿಬ್ಬಂದಿಯ ಭವಿಷ್ಯ ನಿಧಿಯ ಮೊತ್ತವನ್ನು ಪಾವತಿಸುವಂತೆ ಕೋರಿ 2014ರ ಆಗಸ್ಟ್ 26ರಂದು ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆಯ ಜಾರಿ ಅಧಿಕಾರಿ ಶಾಲೆಗೆ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ನೀಡಿದ ತಕ್ಷಣ ಅರ್ಜಿದಾರರು ಬಾಕಿ ಮೊತ್ತವನ್ನು ಪಾವತಿಸಿ ರಸೀದಿಯನ್ನು ಪಡೆದುಕೊಂಡಿದ್ದರು.
ಇದನ್ನೂ ಓದಿ: ಕುದುರೆ ಪಂದ್ಯಗಳಿಗೆ ಅನುಮತಿ ನಿರಾಕರಿಸಿದ ಸರ್ಕಾರ: ಹೈಕೋರ್ಟ್ ಮೆಟ್ಟಿಲೇರಿದ ರೇಸ್ ಕೋರ್ಸ್ - High Court
ಬಳಿಕ ಅರ್ಜಿದಾರರನ್ನು ವಿಚಾರಣೆಗೆ ಹಾಜರಾಗಬೇಕು ಎಂದು ಕೋರಿ ಸೂಚಿಸಿದ್ದರು. ಅದರಂತೆ ವಿಚಾರಣೆಗೆ ಹಾಜರಾಗಿದ್ದ ಅರ್ಜಿದಾರರಿಗೆ 31 ಸಾವಿರ ರೂ. ಮೊತ್ತ ಪಾವತಿಸಲು ಸೂಚನೆ ನೀಡಿದ್ದರು. ಈ ಮೊತ್ತ ಪಾವತಿಸಿದ ಬಳಿಕ ಮತ್ತೆ ವಿಚಾರಣೆ ಪ್ರಾರಂಭಿಸಿ, ಬಾಕಿ ಉಳಿಸಿಕೊಂಡಿದ್ದ ಮೊತ್ತಕ್ಕೆ 14 ಸಾವಿರ ರೂ.ಗಳ ಬಡ್ಡಿಯನ್ನು ಸೇರಿಸಿ ಪಾವತಿಸಲು ಸೂಚನೆ ನೀಡಲಾಗಿತ್ತು. ಟ್ರಸ್ಟ್ ಈ ಮೊತ್ತವನ್ನು ಪಾವತಿ ಮಾಡಿತ್ತು. ಬಳಿಕ ಭವಿಷ್ಯ ನಿಧಿ ಸಂಸ್ಥೆಯ ಅಧಿಕಾರಿಯು ಅರ್ಜಿದಾರರ ವಿರುದ್ಧ ಭವಿಷ್ಯನಿಧಿ ಪಾವತಿ ಮಾಡದ ಆರೋಪದಲ್ಲಿ ಐಪಿಸಿ ಸೆಕ್ಷನ್ 406, 409 ಗಳ ಅಡಿಯಲ್ಲಿ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಈ ಸಂಬಂಧ ವಿಚಾರಣಾ ನ್ಯಾಯಾಲಯ ಕಾಗ್ನಜೆನ್ಸ್ ಪಡೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.