ಕಾರವಾರ: ಗೋವಾ ಹಾಗೂ ಕಾರವಾರವನ್ನು ಸಂಪರ್ಕಿಸುವ ಕಾಳಿ ನದಿ ಸೇತುವೆ ಕುಸಿದುಬಿದ್ದ ಘಟನೆ ಸಂಬಂಧ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದ ಅವರು, "ಕಾರವಾರದಿಂದ ಗೋವಾಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಳಿ ನದಿ ಮೇಲೆ ನಿರ್ಮಿಸಿರುವ ಸೇತುವೆ ಹಾನಿಗೆ ರಸ್ತೆ ನಿರ್ಮಾಣ ಸಂಸ್ಥೆ ಐಆರ್‌ಬಿ ಕಾರಣ. ಕಾಳಿ ನದಿಗೆ ಹೊಸ ಸೇತುವೆ ನಿರ್ಮಿಸುವ ಸಂದರ್ಭದಲ್ಲಿ ಈ ಮೊದಲು ಇದ್ದ ಸೇತುವೆ ಮೇಲಿನಿಂದಲೇ ನಿಂತು ಹೊಸ ಸೇತುವೆಯನ್ನು ನಿರ್ಮಿಸಿರುವ ಕಾರಣ ಹಳೆಯ ಸೇತುವೆ ಕುಸಿತಗೊಂಡಿದ್ದು, ಇದರಿಂದಾಗಿ ಸೇತುವೆ ಮೇಲೆ ಸಾಗುತ್ತಿದ್ದ ಲಾರಿ ಚಾಲಕನ ಸಮೇತ ನೀರಿಗೆ ಬಿದಿದ್ದು, ತಕ್ಷಣ ಸ್ಥಳೀಯ ಮೀನುಗಾರರು, ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡು ಚಾಲಕನನ್ನು ರಕ್ಷಿಸಿದ್ದಾರೆ. ಪ್ರಸ್ತುತ ಇರುವ ಇನ್ನೊಂದು ಸೇತುವೆಯ ದೃಢತೆಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಸುರಕ್ಷತಾ ಪ್ರಮಾಣ ಪತ್ರ ದೊರೆತ ನಂತರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುವುದು" ಎಂದು ತಿಳಿಸಿದರು.
ಈ ದುರ್ಘಟನೆಯಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೂಡಲೇ ಹಳೆಯ ಸೇತುವೆ ಪಕ್ಕದಲ್ಲಿದ್ದ ಹೊಸ ಸೇತುವೆ ಮೇಲೆ ಸಂಚಾರ ನಿರ್ಭಂದಿಸಿದ್ದು, ಸೇತುವೆಯ ಗುಣಮಟ್ಟದ ಕುರಿತು ವರದಿ ನೀಡುವಂತೆ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಕಂಪನಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಮಾತನಾಡಿ, "ರಾತ್ರಿ 1.30 ಸುಮಾರಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಕಂಟ್ರೋಲ್ ರೂಂಗೆ ಸೇತುವೆ ಕುಸಿತ ಬಗ್ಗೆ ಮಾಹಿತಿ ಬಂದ ತಕ್ಷಣ, ಕಂದಾಯ, ಪೊಲೀಸ್ ಮತ್ತು ಸ್ಥಳೀಯ ಮೀನುಗಾರ ನೆರವಿನಿಂದ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿನ ಲೋಕೋಪಯೋಗಿ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಮೀನುಗಾರಿಕಾ ರಸ್ತೆಗಳು ಸೇರಿದಂತೆ ಎಲ್ಲಾ ರಸ್ತೆಗಳ ಮೇಲಿರುವ ಸೇತುವೆಗಳ ದೃಢತೆಯ ಬಗ್ಗೆ ಪರಿಶೀಲಿಸಿ ಸುರಕ್ಷತಾ ಪ್ರಮಾಣ ಪತ್ರದ ವರದಿ ನೀಡುವಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಪಾಯ ಕಂಡು ಬರುವ ಕಡೆ ಪರ್ಯಾಯ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು" ಎಂದು ತಿಳಿಸಿದರು.
"ಲಾರಿ ಚಾಲಕನ ದೂರಿನಂತೆ ಎನ್.ಹೆಚ್.ಎ.ಐ ಮತ್ತು ಐ.ಆರ್.ಬಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ನಿರ್ಲಕ್ಷ್ಯ ಅಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ತಿಳಿಸಿದರು.
ಇದನ್ನೂ ಓದಿ: ಕಾರವಾರ: ಕುಸಿದು ಬಿದ್ದ ಕಾಳಿ ನದಿ ಸೇತುವೆ ನೋಡಲು ಜನದಟ್ಟಣೆ; ಹೈರಾಣಾದ ಪೊಲೀಸರು - Kali River Bridge Collapse