ಬೆಂಗಳೂರು: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಮತ್ತು ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ ಕಲುಷಿತ ಕೆರೆಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಸಂಪೂರ್ಣ ಸ್ವದೇಶಿ ನಿರ್ಮಿತ ಯಂತ್ರವಾದ ಜಲ್ ದೋಸ್ತ್ ಅನ್ನು 2024 ರ ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಪರಿಚಯಿಸಿದೆ. ವಿಜ್ಞಾನಿ ಕಾರ್ತಿಕೇಯನ್ ಅವರ ನೇತೃತ್ವದಲ್ಲಿ ಅಭಿವೃದ್ಧಿಪಡಿಸಿರುವ ಜಲ್ ದೋಸ್ತ್ ಬೆಂಗಳೂರು ಮತ್ತು ಭಾರತದಾದ್ಯಂತ ನಗರ ಪ್ರದೇಶಗಳಲ್ಲಿ ಸರೋವರಗಳ ಮಾಲಿನ್ಯದಿಂದ ಹೆಚ್ಚುತ್ತಿರುವ ಸವಾಲನ್ನು ನಿಭಾಯಿಸಲು ಸಜ್ಜಾಗಿದೆ.
5 ಟನ್ ತ್ಯಾಜ್ಯ ಸಂಗ್ರಹಿಸುವ ಸಾಮರ್ಥ್ಯ: ಯಂತ್ರವು ಪ್ಲಾಸ್ಟಿಕ್ ಅವಶೇಷಗಳು, ಕಳೆಗಳು ಮತ್ತು ಇತರ ಮಾಲಿನ್ಯಕಾರಕಗಳನ್ನು ಜಲಮೂಲಗಳಿಂದ ತೆಗೆದು ಹೊರಹಾಕುತ್ತದೆ. ಒಂದೇ ಕಾರ್ಯಾಚರಣೆಯಲ್ಲಿ 5 ಟನ್ಗಳಷ್ಟು ತ್ಯಾಜ್ಯ ಸಂಗ್ರಹಿಸುವ ಸಾಮರ್ಥ್ಯ ಈ ಯಂತ್ರಕ್ಕಿದೆ. ಪರಿಸರ ಸ್ನೇಹಿ ಪ್ರೊಪಲ್ಷನ್‌ನೊಂದಿಗೆ ವಿನ್ಯಾಸಗೊಳಿಸಲಾಗಿರುವ ಜಲ್ ದೋಸ್ತ್ ಆಳವಿಲ್ಲದ ಮತ್ತು ಕಳೆ ದಟ್ಟವಾಗಿರುವ ಕೆರೆಗಳಲ್ಲಿ ಕಾರ್ಯನಿರ್ವಹಸುತ್ತದೆ. ಜಲಚರಗಳಿಗೆ ಕನಿಷ್ಠ ಅಡಚಣೆಯನ್ನು ಮಾತ್ರ ಉಂಟು ಮಾಡುತ್ತದೆ.
ಜಲ್ ದೋಸ್ತ್ ಪ್ರಾಜೆಕ್ಟ್ ಲೀಡರ್ ಹೇಳುವುದಿಷ್ಟು: ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ಜಲ್ ದೋಸ್ತ್‌ನ ಪ್ರಾಜೆಕ್ಟ್ ಲೀಡರ್ ಕಾರ್ತಿಕೇಯನ್, ಜಲ್ ದೋಸ್ತ್ ಕುರಿತು ಬಿಬಿಎಂಪಿಯೊಂದಿಗೆ ಚರ್ಚೆ ನಡೆಸಲು ಮುಂದಾಗಿದ್ದೇವೆ. ಆದರೆ ಅಧಿಕಾರಿಗಳು ನಮ್ಮ ಪ್ರಸ್ತಾವನೆಗೆ ಇನ್ನೂ ಸ್ಪಂದಿಸಿಲ್ಲ. ಜಲ್ ದೋಸ್ತ್ ಕೆರೆ ಶುಚಿಗೊಳಿಸುವ ಯಂತ್ರಗಳಿಗೆ ಪರ್ಯಾಯವಾಗಿದೆ. ಬೆಲೆ ಸುಮಾರು 2.5 ಕೋಟಿಯಾಗಿದೆ. ಈ ಯಂತ್ರವು ವಾಣಿಜ್ಯ ಬಳಕೆಗೆ ಲಭ್ಯವಿದ್ದು, ಉತ್ಪಾದನೆ ಮತ್ತು ವಿತರಣೆಯನ್ನು ಸುಲಭಗೊಳಿಸಲು ಶ್ರೀವಾರಿ ಇಂಜಿನಿಯರಿಂಗ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕಲುಷಿತ ಸರೋವರಗಳ ಪುನರುಜ್ಜೀವನಕ್ಕೆ ಈ ಯಂತ್ರದ ಸಹಾಯ: ಜಲ್ ದೋಸ್ತ್ನಿಂದ ಕಲುಷಿತ ಸರೋವರಗಳನ್ನು ಶುದ್ಧ, ಪುನರುಜ್ಜೀವನಗೊಳಿಸಿದ ಜಲಮೂಲಗಳಾಗಿ ಪರಿವರ್ತಿಸಬಹುದಾಗಿದೆ. ಇದರ ನಿಯೋಜನೆಯು ಬೆಂಗಳೂರಿನ ಕೆರೆ ಮಾಲಿನ್ಯದ ಬಿಕ್ಕಟ್ಟನ್ನು ಪರಿಹರಿಸಲು ಪ್ರಮುಖ ಹೆಜ್ಜೆಯಾಗಿದೆ. ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಉಪಕ್ರಮವಾದ ಅಡಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸ್ಥಳೀಯವಾಗಿ ತಯಾರಿಸಿದ ಉಪಕರಣಗಳನ್ನು ಬಳಸಿ 90 ಲಕ್ಷ ಬೆಲೆಯಲ್ಲಿ ಸಹ ಜಲ್ ದೋಸ್ತ್ ಅನ್ನು ಅಭಿವೃದ್ಧಿಪಡಿಸಬಹುದಾಗಿದೆ. ಇದನ್ನು ಮುನ್ಸಿಪಲ್ ಕಾರ್ಪೊರೇಷನ್‌ಗಳು, ಸರ್ಕಾರೇತರ ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ಖರೀದಿಸುವ ಅವಕಾಶವನ್ನು ಸಹ ಕಲ್ಪಿಸಲಾಗುತ್ತಿದೆ ಎಂದು ಕಾರ್ತಿಕೇಯನ್ ಮಾಹಿತಿ ನೀಡಿದರು.
ಓದಿ: ಭವಿಷ್ಯದಲ್ಲಿ ಚಿಕಿತ್ಸಾ ಕ್ರಮವೇ ಬದಲಾಗಲಿದೆ: ಐಐಎಸ್ಸಿ ವಿಜ್ಞಾನಿ ಪ್ರೊ.ದೀಪಕ್