ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.9-19 ವರಗೆ 10 ದಿನಗಳ ಕಾಲ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರ ನೇತೃತ್ವದಲ್ಲಿ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆ ಸಂಬಂಧ ಏನೆಲ್ಲಾ ತಯಾರಿ ಮಾಡಿಕೊಂಡಿದ್ದಾರೆ ಎಂಬ ಕುರಿತು ಈಟಿವಿ ಭಾರತ ಜೊತೆಗೆ ಅವರು ಮಾತನಾಡಿರುವ ವರದಿ ಇಲ್ಲಿದೆ.
ಅಧಿವೇಶನ ಹಿನ್ನೆಲೆ ಒಟ್ಟು 6 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದ್ದೇವೆ. 6 ಎಸ್ಪಿಗಳು, 10 ಹೆಚ್ಚುವರಿ ಎಸ್ಪಿಗಳು, 38 ಡಿವೈಎಸ್ಪಿಗಳು, 100 ಪೊಲೀಸ್ ಇನ್ಸಪೆಕ್ಟರ್ಗಳು, 235 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳನ್ನು ಅಧಿವೇಶನದ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. 30 ಡ್ರೋನ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ. ಸಿಸಿಟಿವಿಗಳನ್ನು ಪ್ರತಿಭಟನೆಯ ಜಾಗದಲ್ಲಿ ಅಳವಡಿಸಲಾಗಿದೆ.
80ಕ್ಕೂ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಅದೇ ರೀತಿ ನಗರದ ಬಂದೋಬಸ್ತ್ ಸಲುವಾಗಿ ರಸ್ತೆ ಬಂದೋಬಸ್ತ್, ಟ್ರಾಫಿಕ್ ಬಂದೋಬಸ್ತ್ ಸೇರಿ 20 ವಲಯಗಳನ್ನು ರಚಿಸಲಾಗಿದೆ. ಪ್ರತಿ ವಲಯಕ್ಕೂ ಓರ್ವ ಮೇಲ್ವಿಚಾರಕ ವೀಕ್ಷಕರನ್ನು ನೇಮಿಸಲಾಗಿದೆ. ಮುಖ್ಯ ವಲಯಗಳಲ್ಲಿ ಓರ್ವ ಎಸ್ಪಿ ರ್ಯಾಂಕ್ ಅಧಿಕಾರಿ ಇರುತ್ತಾರೆ. ಸುವರ್ಣ ವಿಧಾನಸೌಧ ವಲಯದಲ್ಲಿ ಒಬ್ಬರು ಎಸ್ಪಿ, ಡಿಎಸ್ಪಿ ಸೇರಿ ಮತ್ತಿತರ ಅಧಿಕಾರಿಗಳು ಇರಲಿದ್ದಾರೆ ಎಂದು ತಿಳಿಸಿದರು.
ಹಾಗೇ, 35 ಕೆಎಸ್ ಆರ್ ಪಿ ತುಕಡಿಗಳು, 10 ಡಿಆರ್ ಸಿಆರ್, 8 ಕ್ಯುಆರ್ ಟೀಂ, 16 ಎಸಿ ಟೀಂ ಮಂಜೂರು ಆಗಿವೆ. ಬೆಂಗಳೂರಿನಿಂದ 1 ಗರುಡ ವಿಶೇಷ ಕಮಾಂಡೋ ಪಡೆ ಬರುತ್ತಿದೆ. 300 ಬಾಡಿ ವೋರ್ನ್ ಕ್ಯಾಮರಾ ತರಿಸಲಾಗುತ್ತಿದೆ. ಇದು ಪ್ರಪಂಚದಲ್ಲಿ ಬಹಳ ಉಪಯುಕ್ತವಾಗಿದೆ. ಏನೆಲ್ಲಾ ನಡೆಯುತ್ತಿದೆ ಎಂಬುದು ತನ್ನಿಂದ ತಾನೇ ವಿಡಿಯೋ ರೆಕಾರ್ಡ್ ಆಗುತ್ತದೆ ಎಂದು ಹೇಳಿದರು.
ಚಳಿಗಾಲ ಅಧಿವೇಶನದಲ್ಲಿ ಈವರೆಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲು 55 ಅರ್ಜಿಗಳು, 5 ಮನವಿ ಸಲ್ಲಿಸುವ ಬಗ್ಗೆ ಅರ್ಜಿಗಳು ಬಂದಿವೆ. ಯಾವ ಪ್ರತಿಭಟನೆ ಪ್ರಮುಖ ಅಂತಾ ಹೇಳಲು ಆಗುವುದಿಲ್ಲ. ಎಲ್ಲವೂ ಪ್ರಮುಖ ಪ್ರತಿಭಟನೆಗಳೇ ಅಂತಾ ನಾವು ಪರಿಗಣಿಸುತ್ತೇವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯಬೇಕು ಎಂದು ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅಭಿಪ್ರಾಯ ಪಟ್ಟರು.
ನಿಗದಿತ ಸ್ಥಳದಲ್ಲಿ ಪ್ರತಿಭಟನೆಗೆ ಅವಕಾಶ; ಪಂಚಮಸಾಲಿ ಸಮುದಾಯದ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಈಗಾಗಲೇ ಸ್ವಾಮೀಜಿ ಅವರನ್ನು ಸಂಪರ್ಕಿಸಲಾಗಿದೆ. ಟ್ರಾಕ್ಟರ್ ರ‍್ಯಾಲಿ ಮೂಲಕ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕದಂತೆ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಮನವಿಗೆ ಸ್ವಾಮೀಜಿ ಸ್ಪಂದಿಸುವ ವಿಶ್ವಾಸವಿದೆ. ಆದರೂ ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ನಿಗದಿತ ಸ್ಥಳದಲ್ಲಿ ಪ್ರತಿಭಟಿಸಿದರೆ ಸಮಸ್ಯೆ ಇಲ್ಲ. ಆದರೆ, ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರೆ ನಾವು ಅವರನ್ನು ತಡೆಯುತ್ತೇವೆ ಎಂದರು.
ಈ ಬಾರಿಯ ಅಧಿವೇಶನದಲ್ಲಿ ಯಾವುದೇ ರೀತಿ ಅಹಿತಕರ ಘಟನೆ ಸಂಭವಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಸಾರ್ವಜನಿಕರು ಸಹಕಾರ ಕೊಟ್ಟರೆ ಅಧಿವೇಶನ ಸೂಪರ್ ಸಕ್ಸಸ್ ಆಗಲಿದೆ ಎಂದು ಪೊಲೀಸ್ ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಸಜ್ಜು: ಜಿಲ್ಲಾಧಿಕಾರಿ ಜೊತೆ 'ಈಟಿವಿ ಭಾರತ' ವಿಶೇಷ ಸಂದರ್ಶನ