ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಿದ್ಧಪಡಿಸಿರುವ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯ (ಜಾತಿ ಗಣತಿ) ವರದಿಯನ್ನು ಬಹಿರಂಗ ಪಡಿಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಮಧ್ಯಂತರ ಮನವಿ ಕುರಿತ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರ ನಡೆಸಲಿದೆ.
ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿ (ಜಾತಿ ಗಣತಿ) ಬಹಿರಂಗಗೊಳಿಸಬೇಕು ಎಂದು ಕೋರಿ ಡಾ.ಮುಖ್ಯಮಂತ್ರಿ ಚಂದ್ರು ಅವರು 2021ರಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿ ಹಾಸನದ ಹೊಳೆನರಸೀಪುರ ತಾಲೂಕಿನ ವಕೀಲ ಓ.ಕೆ.ರಘು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ರಘು ಪರ ವಕೀಲರು ಗುರುವಾರ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಟಿ.ಜೆ. ಶಿವಶಂಕರೇ ಗೌಡ ಅವರಿದ್ದ ವಿಭಾಗೀಯ ಪೀಠದ ಮುಂದೆ ಹಾಜರಾಗಿ, ಜಾತಿ ಸಮೀಕ್ಷೆ ಮಾಡಲು ಆಯೋಗಕ್ಕೆ ಅಧಿಕಾರವೇ ಇಲ್ಲ. ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರ ಅಧಿಕಾರ ಅವಧಿ ಗುರುವಾರ ಕೊನೆಗೊಳ್ಳಲಿದೆ. ಇದರಿಂದ ಆಯೋಗವು ತರಾತುರಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದೆ. ಈ ಆಯೋಗದ ಹಿಂದಿನ ಅಧ್ಯಕ್ಷರು ಸಿದ್ಧಪಡಿಸಿದ್ದ ವರದಿಯನ್ನು ಹಾಲಿ ಅಧ್ಯಕ್ಷರು ಸಲ್ಲಿಕೆ ಮಾಡುತ್ತಿದ್ದಾರೆ. ಹಾಗಾಗಿ, ಸರ್ಕಾರಕ್ಕೆ ವರದಿ ಸಲ್ಲಿಸುವುದಕ್ಕೆ ತಡೆಹಿಡಿಯಬೇಕು ಹಾಗೂ ವರದಿ ಬಹಿರಂಗವಾಗಲು ಅವಕಾಶ ನೀಡದಂತೆ ನಿರ್ಬಂಧಿಸಬೇಕು. ಈ ಕುರಿತು ಮನವಿ ಮಾಡಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದ್ದು, ಅದನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, ವರದಿ ಸಲ್ಲಿಕೆಯ ವಿಚಾರವನ್ನು ನ್ಯಾಯಾಲಯ ಮೇಲ್ವಿಚಾರಣೆ ನಡೆಸಲು ಸಾಧ್ಯವೇ ಎಂದು ರಘು ಪರ ವಕೀಲರನ್ನು ಕೇಳಿತು. ಸರ್ಕಾರಿ ವಕೀಲರು ಪ್ರತಿಕ್ರಿಯಿಸಿ, ಆಯೋಗವು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿ ನಡೆಸಿರುವುದನ್ನು ಪ್ರಶ್ನಿಸಿರುವುದನ್ನು ಬುಧವಾರವಷ್ಟೇ ಮತ್ತೊಂದು ಅರ್ಜಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಅದು ಸಾಮಾನ್ಯ ಪ್ರಕ್ರಿಯೆಯಂತೆ ವಿಚಾರಣೆಗೆ ನಿಗದಿಯಾಗಬೇಕು ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಈ ಕುರಿತು ಪರಿಶೀಲನೆ ನಡೆಸಿದ ವಿಭಾಗೀಯ ಪೀಠ, ರಘು ಅವರ ಮಧ್ಯಂತರ ಮನವಿ ಕುರಿತು ಶುಕ್ರವಾರ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು. ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿ ನಡೆಸುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲವಾಗಿದೆ. ಅಂತಹ ಅಧಿಕಾರವನ್ನು ಕೇಂದ್ರ ಸರ್ಕಾರ ಮಾತ್ರ ಹೊಂದಿದೆ. ಹೀಗಿದ್ದರೂ ಸಮಿಕ್ಷೆ ನಡೆಸಲು ಆಯೋಗಕ್ಕೆ ಸೂಚಿಸಿ 2014ರ ಜ.23ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು. ಆಯೋಗ ನಡೆಸಿರುವ ಸಮೀಕ್ಷೆಯನ್ನು ಕಾನೂನು ಬಾಹಿರವೆಂದು ಘೋಷಿಸಬೇಕು ಮತ್ತು ವರದಿಯ ಅನುಸಾರ ಯಾವುದೇ ಕ್ರಮಗಳನ್ನು ಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಮಾಜ ಸಂಪರ್ಕ ವೇದಿಕೆಯು ಹೈಕೋರ್ಟ್‌ಗೆ ಮತ್ತೊಂದು ಅರ್ಜಿಯನ್ನು ಸಲ್ಲಿಸಿದೆ. ಅದು ಸಹ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಇದನ್ನೂ ಓದಿ: ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆ: ಪರಿಶೀಲಿಸಿ ಸೂಕ್ತ ಕ್ರಮ- ಸಿಎಂ ಸಿದ್ದರಾಮಯ್ಯ