ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗ ತನ್ನ ಮಧ್ಯಂತರ ವರದಿಯನ್ನು ಸಿಎಂ ಸಿದ್ದರಾಮಯ್ಯನವರಿಗೆ ಶನಿವಾರ ಸಲ್ಲಿಸಿತು.
ಆಗಸ್ಟ್ 2023ರಲ್ಲಿ ರಾಜ್ಯ ಸರ್ಕಾರ ಕೋವಿಡ್ ಹಗರಣದ ತನಿಖೆ ನಡೆಸಲು ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗವನ್ನು ರಚಿಸಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಾಗಿರುವ ಕೋವಿಡ್ ನಿರ್ವಹಣೆ, ಔಷಧ, ಮಾಸ್ಕ್, ಉಪಕರಣಗಳು ಹಾಗೂ ಸಾಮಗ್ರಿಗಳ ಖರೀದಿ, ಆಮ್ಲಜನಕ ನಿರ್ವಹಣೆ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳ ಕುರಿತು ತನಿಖೆ ನಡೆಸಲು ಆಯೋಗವನ್ನು ರಚಿಸಲಾಗಿತ್ತು.
ಸಮಿತಿಗೆ 3 ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಬಳಿಕ ಈ ಅವಧಿಯನ್ನು ಮೇ 24, 2024ರವರೆಗೆ ವಿಸ್ತರಿಸಲಾಗಿದೆ. ಆದರೆ, ಆಯೋಗ ತನಿಖೆಗೆ ಮತ್ತಷ್ಟು ಕಾಲಾವಧಿಯನ್ನು ಕೋರಿದ ಹಿನ್ನೆಲೆಯಲ್ಲಿ ಅವಧಿಯನ್ನು ಆಗಸ್ಟ್ 31, 2024ರವರೆಗೆ ವಿಸ್ತರಿಸಲಾಗಿತ್ತು.
ವಿಚಾರಣಾ ಆಯೋಗ ಸಂಬಂಧಪಟ್ಟ ಇಲಾಖೆಗಳಿಂದ ಎರಡು ಲಕ್ಷಕ್ಕೂ ಅಧಿಕ ಕಡತಗಳನ್ನು ತರಿಸಿಕೊಂಡು ಪರಿಶೀಲಿಸಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಟೆಂಡರ್, ವೈದ್ಯಕೀಯ ಉಪಕರಣ, ವೆಂಟಿಲೇಟರ್‌ಗಳ ಖರೀದಿ ಹಾಗೂ ಆಮ್ಲಜನಕ ನಿರ್ವಹಣೆ ಸಂಬಂಧಿತ ಕಡತಗಳನ್ನು ತರಿಸಿಕೊಂಡಿದೆ. ಸಂಬಂಧಿತ ಅಧಿಕಾರಿಗಳ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ.
ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ಹಾರವರ ನೇತೃತ್ವದ ತನಿಖಾ ಆಯೋಗದವರು ತನಿಖಾ ವರದಿಯನ್ನು ಮುಖ್ಯಮಂತ್ರಿ @siddaramaiah ಅವರಿಗೆ ಸಲ್ಲಿಸಿದರು.
— CM of Karnataka (@CMofKarnataka) August 31, 2024
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. pic.twitter.com/bzHjQAt1Yx
ಮಧ್ಯಂತರ ವರದಿಯಲ್ಲಿ ಭಾಗ 1ರಿಂದ ಭಾಗ 6 (ಡಿ) ವರೆಗೆ ವಿಂಗಡಿಸಿ ಕೋವಿಡ್ ಉಪಕರಣ ಖರೀದಿಗಳ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಸಂಸ್ಥೆ ಖರೀದಿಸಿದ 1,754.34 ಕೋಟಿ ರೂ. ವೆಚ್ಚದ ಸಲಕರಣೆ ಬಗ್ಗೆ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಳಿದಂತೆ ರಾಷ್ಟ್ರೀಯ ಆರೋಗ್ಯ ಮಿಷನ್ ಖರೀದಿಸಿದ 1,406.54 ಕೋಟಿ ರೂ. ವೆಚ್ಚದ ಸಾಮಗ್ರಿಗಳು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಖರೀದಿ ಮಾಡಿದ್ದ 918.34 ಕೋಟಿ ವೆಚ್ಚದ ಸಾಮಗ್ರಿ ಹಾಗೂ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಖರೀದಿಸಿದ್ದ 1,394.59 ಕೋಟಿ ರೂ. ವೆಚ್ಚದ ವೈದ್ಯಕೀಯ ಸಲಕರಣೆ ಬಗ್ಗೆ ವಿಚಾರಣಾ ವರದಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಖರೀದಿಸಿದ 569.02 ಕೋಟಿ ರೂ. ವೆಚ್ಚದ ಔಷಧ, ಕಿದ್ವಾಯಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಆನ್ಕಲಾಜಿ ಖರೀದಿಸಿದ 264.37 ಕೋಟಿ ರೂ. ವೆಚ್ಚದ ಸಾಮಗ್ರಿ, ಬಿಬಿಎಂಪಿ ಕೇಂದ್ರ ಕಚೇರಿ ಖರೀದಿ ಮಾಡಿದ 732.41 ಕೋಟಿ ರೂ. ವೆಚ್ಚದ ಸಾಮಗ್ರಿ, ದಾಸರಹಳ್ಳಿ ಬಿಬಿಎಂಪಿ ವಲಯ ಕಚೇರಿ ಖರೀದಿಸಿದ್ದ 26.26 ಕೋಟಿ ರೂ. ವೆಚ್ಚದ ಸಲಕರಣೆ, ಬಿಬಿಎಂಪಿ ಪೂರ್ವ ವಲಯ ಕಚೇರಿ ಖರೀದಿಸಿದ 78.08 ಕೋಟಿ ರೂ. ವೆಚ್ಚದ ಸಾಮಗ್ರಿ, ಬಿಬಿಎಂಪಿ ಮಹದೇವಪುರ ವಲಯ ಕಚೇರಿ ಖರೀದಿಸಿದ 48.57 ಕೋಟಿ ರೂ. ವೆಚ್ಚದ ವೈದ್ಯಕೀಯ ಸಲಕರಣೆ ಹಾಗೂ ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ಕಚೇರಿ ಖರೀದಿ ಮಾಡಿದ್ದ 31.03 ಕೋಟಿ ರೂ. ವೆಚ್ಚದ ವೈದ್ಯಕೀಯ ಸಾಮಗ್ರಿಗಳ ಕುರಿತ ಒಟ್ಟು 1,722 ಪುಟಗಳ ವರದಿಯನ್ನು ಆಯೋಗ ಸಲ್ಲಿಸಿದೆ.
ಉಳಿದ ಬಿಬಿಎಂಪಿ ವಲಯ ಕಚೇರಿಗಳು ಹಾಗೂ 31 ಜಿಲ್ಲೆಗಳಲ್ಲಿ ಖರೀದಿಸಿದ ಕೋವಿಡ್ ಸಂಬಂಧಿತ ವೈದ್ಯಕೀಯ ಉಪಕರಣ, ಸಾಮಗ್ರಿ, ಔಷಧಗಳ ವೆಚ್ಚದ ಮೇಲಿನ ತನಿಖಾ ವರದಿಯನ್ನು ಮುಂದಿನ ದಿನಗಳಲ್ಲಿ ವಿಚಾರಣಾ ಆಯೋಗವು ನೀಡಲಿದೆ.