ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿಯಾಗಿದೆ. ಆನೆಚೌಕೂರು ವನ್ಯಜೀವಿ ವಲಯದ ಬಫರ್ ಪ್ರದೇಶಕ್ಕೆ ಸೇರಿದ ಚೆನ್ನಂಗಿ ಶಾಖೆಯ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದಲ್ಲಿ ಭಾನುವಾರ ಕೃತ್ಯ ನಡೆದಿದ್ದು, ದುಷ್ಕರ್ಮಿಗಳು ಕಾಡುಕೋಣಕ್ಕೆ ಗುಂಡು ಹೊಡೆದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಪಿರಿಯಾಪಟ್ಟಣ ಬಳಿಯ ಪಾರದಕಟ್ಟೆ ಕಳ್ಳಭೇಟೆ ತಡೆ ಶಿಬಿರಕ್ಕೆ ಹೋಗುವ ಪ್ರದೇಶದಲ್ಲಿ ಇರುವ ಅಣ್ಣಿಕೆರೆ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ಗಸ್ತಿನಲ್ಲಿ ಇದ್ದಾಗ ಗುಂಡು ಹಾರಿಸಿದ್ದ ಶಬ್ದ ಕೇಳಿದೆ. ತಕ್ಷಣ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಸುಮಾರು 11 ವರ್ಷ ವಯಸ್ಸಿನ ಗಂಡು ಕಾಡುಕೋಣ ಗುಂಡೇಟಿನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದು ಕಂಡು ಬಂದಿದೆ.
ವಿಷಯ ತಿಳಿದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ, ಹಾಗೂ ಇತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ನಂತರ ಪಶು ವೈದ್ಯಾಧಿಕಾರಿ ರಮೇಶ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದೆ. ಅಪರಿಚಿತ ದುಷ್ಕರ್ಮಿಗಳ ಮೇಲೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಡಿಸಿಎಫ್ ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಅಥಣಿಯ ಕೋಹಳ್ಳಿಯಲ್ಲಿ ಕಾಡುಕೋಣ ಪ್ರತ್ಯಕ್ಷ: ಗಾಯಗೊಂಡ ರೈತ