ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನನಿತ್ಯ ಉತ್ಪತ್ತಿಯಾಗುವ ಕಸ ವಿಲೇವಾರಿ ಮಾಡುವುದೇ ಪಾಲಿಕೆಗೆ ತಲೆಬಿಸಿಯಾಗಿ ಪರಿಣಮಿಸಿತ್ತು. ಆದರೆ ಇದೀಗ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಮಹಾನಗರ ಪಾಲಿಕೆ ಮುಂದಾಗಿದೆ. 22 ಕೋಟಿ ರೂಪಾಯಿ ವೆಚ್ಚದಲ್ಲಿ 200 ಟಿಪಿಡಿ ಸಾಮರ್ಥ್ಯದ ನೂತನ ಘನತ್ಯಾಜ್ಯ ಸಂಸ್ಕರಣಾ ಘಟಕ ಲೋಕಾರ್ಪಣೆ ಮಾಡಲಾಗಿದೆ. ಪಾಲಿಕೆ ಘನತ್ಯಾಜ್ಯದಿಂದ ಗೊಬ್ಬರವನ್ನು ತಯಾರಿಸಲು ಸನ್ನದ್ಧವಾಗಿದ್ದು, ಈ ಗೊಬ್ಬರ ರೈತರಿಗೆ ಸಿಗಲಿದೆ.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ವಾರ್ಡ್ಗಳಿಂದ ಒಟ್ಟು 170 ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. 170 ಟನ್ ಕಸದಲ್ಲಿ 90 ಟನ್ ಹಸಿ ಕಸ, 60 ಟನ್ ಒಣ ಕಸ ಹಾಗೂ 20 ಟನ್ ಇತರೆ ತ್ಯಾಜ್ಯವನ್ನು ವಿಲೇವಾರಿ ಘಟಕದಲ್ಲಿ ಶೇಖರಣೆ ಮಾಡಲಾಗುತ್ತಿತ್ತು. ಪಾಲಿಕೆ ಅಧಿಕಾರಿಗಳು ಇದೀಗ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಲು ನೂತನ ಪ್ಲಾನ್ ಮಾಡಿದೆ.
17.67 ಕೋಟಿ ರೂಪಾಯಿ ವೆಚ್ಚದಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ, ಕಾಂಕ್ರಿಟ್ ರಸ್ತೆ, ಸಿ.ಸಿ.ಚರಂಡಿ, ಕಟ್ಟಡ ಸ್ಯಾನಿಟರಿ ಲ್ಯಾಂಡ್ ಫಿಲ್ ಮತ್ತು ವಿದ್ಯುತ್ ಹಾಗೂ ಇತರೆ ಸಿವಿಲ್ ಕಾಮಗಾರಿಗಳನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟನೆ ಮಾಡಿದ್ದಾರೆ. 4.63 ಕೋಟಿ ರೂಪಾಯಿ ವೆಚ್ಚದಲ್ಲಿ 200 ಟಿಪಿಡಿ ಘನತ್ಯಾಜ್ಯ ಸಂಸ್ಕರಣಾ ಘಟಕದ ಯಂತ್ರೋಪಕರಣಗಳನ್ನು ಕೂರಿಸಲಾಗಿದೆ. ಸುಮಾರು 12 ಎಕರೆ ಪ್ರದೇಶದಲ್ಲಿ ಈ ಘನತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡಲಾಗಿದೆ. ವಿಲೇವಾರಿ ಘಟಕದಲ್ಲಿದ್ದ ಕಸವನ್ನು ರಿಸೈಕ್ಲಿಂಗ್ ಮಾಡಲು ಯೂನಿಟ್ ಇರಲಿಲ್ಲ. ದಾವಣಗೆರೆಯಲ್ಲಿ ಘಟಕ ಆರಂಭವಾಗಿದ್ದು, ಇದನ್ನು ಗೊಬ್ಬರ ಮಾಡಿ ರೈತರಿಗೆ ನೀಡಲು ಚಿಂತನೆ ನಡೆಸಲಾಗಿದೆ.
ರೈತರಿಗೆ ಸಿಗಲಿದೆ ಗೊಬ್ಬರ: ಅವರಗೊಳ್ಳದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸುಮಾರು ಎರಡೂವರೆ ಲಕ್ಷ ಟನ್ನಷ್ಟು ಕಸವಿದ್ದು, ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪ್ರತಿನಿತ್ಯ ಮರುಬಳಕೆ ಮಾಡಬಹುದಾಗಿದೆ. ಪ್ರತಿನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಬಳಸಿ ಗೊಬ್ಬರ ತಯಾರು ಮಾಡಿ ಅದನ್ನು ರೈತರಿಗೆ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ಸಭೆಯಲ್ಲಿ ದರ ನಿಗದಿ ಮಾಡಿ ರೈತರಿಗೆ ಸಿಗುವಂತೆ ಮಾಡಲು ಚಿಂತಿಸಲಾಗಿದೆ.
ನಿಟ್ಟುಸಿರುಬಿಟ್ಟ ಅವರಗೊಳ್ಳ ಗ್ರಾಮದ ಜನ: ಅವರಗೊಳ್ಳದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಪ್ರತಿನಿತ್ಯ ಬರುತ್ತಿದ್ದ ಘನತ್ಯಾಜ್ಯದಿಂದಾಗಿ ಅಕ್ಕಪಕ್ಕದ ಜಮೀನುಗಳಿಗೆ ಪ್ಲಾಸ್ಟಿಕ್ ಕವರುಗಳು ಸೇರಿದಂತೆ ವಿವಿಧ ವಸ್ತುಗಳು ಗಾಳಿಗೆ ಹಾರಿಕೊಂಡು ಹೋಗಿ ಬೀಳುತ್ತಿದ್ದವು. ಇದರಿಂದಾಗಿ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಆದರೆ ಇದೀಗ ಸಂಸ್ಕರಣಾ ಘಟಕದಿಂದಾಗಿ ರೈತರ ಜಮೀನುಗಳಿಗೆ ಹಾರಿ ಬರುತ್ತಿದ್ದ ಪ್ಲಾಸ್ಟಿಕ್ ಕಡಿಮೆಯಾಗಲಿದೆ. ಅಷ್ಟೇ ಅಲ್ಲದೇ ರೈತರಿಗೆ ಗೊಬ್ಬರವೂ ಸಿಗುವಂತಾಗಿದೆ.
ಪಾಲಿಕೆ ಆಯುಕ್ತೆ ರೇಣುಕಾ ಹೇಳಿದ್ದೇನು?: ಪಾಲಿಕೆ ಆಯುಕ್ತೆ ರೇಣುಕಾ ಅವರು ಪ್ರತಿಕ್ರಿಯಿಸಿ "ತ್ಯಾಜ್ಯ ವಿಲೇವಾರಿ ಮಾಡುವುದು ಯಕ್ಷ ಪ್ರಶ್ನೆಯಾಗಿತ್ತು. ಇದೀಗ ತ್ಯಾಜ್ಯದಿಂದ ಗೊಬ್ಬರ ಮಾಡಲು ನೂತನ ಘಟಕವನ್ನು ಆರಂಭಿಸಿದ್ದೇವೆ. ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸಗಳನ್ನು 2004 ರಿಂದ ವಿಲೇವಾರಿ ಘಟಕದಲ್ಲಿ ಶೇಖರಣೆ ಮಾಡಲಾಗುತ್ತಿತ್ತು. ಇದೀಗ 17 ಕೋಟಿ ವೆಚ್ಚದಲ್ಲಿ ಎಸ್ಬಿಎಮ್ ಅನುದಾನದಡಿ ನೂತನ ಸಂಸ್ಕರಣ ಘಟಕ ನಿರ್ಮಾಣ ಮಾಡಲಾಗಿದೆ. ಈ ತ್ಯಾಜ್ಯದಿಂದ ಗೊಬ್ಬರ ಮಾಡಲು ಇದನ್ನು ಆರಂಭಿಸಿದ್ದೇವೆ. ಮಿಷನರಿ, ರಸ್ತೆ, ಎಲೆಕ್ಟ್ರಿಕಲ್ ವರ್ಕ್, ಶೆಡ್, ಟ್ರೈನ್, ಸ್ಟ್ರೀಟ್ ಲೈಟ್ ಎಲ್ಲವೂ ಒಳಗೊಂಡಿದೆ. ಈ ಗೊಬ್ಬರ ರೈತರಿಗೆ ಉಪಯೋಗ ಆಗಲಿದೆ. ರೈತರು ಅಡಿಕೆ ತೋಟ, ತೆಂಗಿನ ತೋಟ, ಭತ್ತಕ್ಕೆ, ತರಕಾರಿ ಬೆಳೆಯಲು ಆಸರೆಯಾಗಲಿದೆ.
ಇದನ್ನೂ ಓದಿ: ಕಸದಿಂದ ರಸ; ತ್ಯಾಜ್ಯಕ್ಕೆ ಗೋವಾದಲ್ಲಿ ಫುಲ್ ಡಿಮ್ಯಾಂಡ್, 6 ಟನ್ ಪ್ಲಾಸ್ಟಿಕ್ ರವಾನೆ