ಮಂಡ್ಯ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪಾಂಡವಪುರದಲ್ಲಿ ಆರ್‌ಎಸ್‌ಎಸ್ ಕಚೇರಿ ಉದ್ಘಾಟಿಸಲಾಯಿತು. ಈ ಸಮಾರಂಭದಲ್ಲಿ ಜೆಡಿಎಸ್ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಕಾಂಗ್ರೆಸ್ ಬೆಂಬಲಿತ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾಗವಹಿಸಿದ್ದು, ಎಲ್ಲರ ಗಮನ ಸೆಳೆಯಿತು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನವೇ ಪಾಂಡವಪುರದಲ್ಲಿ ಆರ್‌ಎಸ್‌ಎಸ್ ಕಚೇರಿ ಉದ್ಘಾಟನೆ ಮಾಡಲಾಗಿದೆ. ಸಮಾರಂಭದಲ್ಲಿ ಮುಖಂಡರ ಮಾತು ಕೇಳಿ ರಾಮನದ್ದು ಜಾತ್ಯತೀತ ವ್ಯಕ್ತಿತ್ವ ಎಂದು ಅರ್ಥವಾಯಿತು. ಎಲ್ಲರೂ ಒಟ್ಟಾಗಿ ಹೋಗಬೇಕು ಎಂಬುದು ನನ್ನ ಅನಿಸಿಕೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದರು.
ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ಇಂದು ಇಡೀ ಜಗತ್ತಿನ ಕಣ್ಣು ಅಯೋಧ್ಯೆ ಅತ್ತ ನೆಟ್ಟಿದೆ. ಅದಕ್ಕೆ ಕಾರಣ ಬಹಳ ವರ್ಷಗಳ ಹೋರಾಟದ ಫಲ. ಇಂದು ಆರ್‌ಎಸ್‌ಎಸ್ ಕಚೇರಿ ಉದ್ಘಾಟನೆ ಮಾಡಿ, ರಾಮನಿಗೆ ಪೂಜೆ ಸಲ್ಲಿಸುವ ಅವಕಾಶವನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ಮಾಡಿಕೊಟ್ಟಿದ್ದಾರೆ. ನಾವೆಲ್ಲರೂ ಇಲ್ಲಿ ಪಕ್ಷಾತೀತವಾಗಿ ಭಾಗವಹಿಸಿದ್ದೇವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಮಾತನಾಡಿ, ರಾಮಮಂದಿರ ಉದ್ಘಾಟನೆಯ ದಿನವೇ ಆರ್‌ಎಸ್‌ಎಸ್ ಕಚೇರಿ ಉದ್ಘಾಟನೆಯಾಗುತ್ತಿರುವುದಕ್ಕೆ ಸಂತಸವಾಗುತ್ತಿದೆ. ಶ್ರೀರಾಮ ದೇಶದ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸುತ್ತೇನೆ. ಆರ್‌ಎಸ್‌ಎಸ್ ಕಚೇರಿ ಪಕ್ಷಾತೀತವಾಗಿದೆ ಎಂದು ಹೇಳಿದರು.
ಇನ್ನು ನೂತನ ಕಚೇರಿ ಉದ್ಘಾಟನೆಗೆ ಬಿಜೆಪಿ, ಜೆಡಿಎಸ್, ರೈತಸಂಘದ ನಾಯಕರು ಪಕ್ಷಾತೀತವಾಗಿ ಪಾಲ್ಗೊಂಡಿದ್ದರು. ಕಚೇರಿ ಉದ್ಘಾಟನೆಯಲ್ಲಿ ಮಾಜಿ ಸಚಿವ ಪುಟ್ಟರಾಜು ಅವರು ದಂಪತಿ ಸಮೇತ ಭಾಗವಹಿಸಿದ್ದರು. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಸೇರಿ ಹಲವರು ಭಾಗವಹಿಸಿದ್ದರು. ನೂತನವಾಗಿ ಆರಂಭಿಸಲಾದ ಆರ್‌ಎಸ್‌ಎಸ್ ಕಚೇರಿಯಲ್ಲಿ ವಿಧಿ ವಿಧಾನದಂತೆ ಪೂಜೆ ನಡೆಸಲಾಯಿತು. ಈ ಸಮಾರಂಭದಲ್ಲಿ ವಿವಿಧ ಪಕ್ಷಗಳ ರಾಜಕೀಯ ನಾಯಕರು ಪಕ್ಷಾತೀತವಾಗಿ ಭಾಗವಹಿಸಿ ಗಮನ ಸೆಳೆದರು.
ಇದನ್ನೂ ಓದಿ: ಕೋಟ್ಯಂತರ ರಾಮಭಕ್ತರ ಆಸೆ ಇಂದು ಈಡೇರಿದೆ, ಕನ್ನಡಿಗರೂ ಹೆಮ್ಮೆ ಪಡುವ ದಿನ ಇದಾಗಿದೆ: ಬಿ ವೈ ವಿಜಯೇಂದ್ರ
ರಾಮಲಲ್ಲಾ ಮೂರ್ತಿಯ ಶಿಲೆ ಸಿಕ್ಕ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಮತ್ತೊಂದೆಡೆ, ಬಾಲರಾಮ ಮೂರ್ತಿಯ ಕೆತ್ತನೆಗೆ ಬಳಸಿರುವ ಕೃಷ್ಣ ಶಿಲೆ ಸಿಕ್ಕ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿ-ಗುಜ್ಜೆಗೌಡನ ಪುರ ಬಳಿಯ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಶಾಸಕ ಜಿ.ಟಿ.ದೇವೇಗೌಡ ನೆರವೇರಿಸಿದರು. ಈ ಸಂದರ್ಭದಲ್ಲಿ ಜಮೀನಿನ ಮಾಲೀಕ ಹಾಗೂ ಕೃಷ್ಣ ಶಿಲೆಯನ್ನು ಅಯೋಧ್ಯೆಗೆ ಕಳುಹಿಸಿಕೊಟ್ಟ ಶ್ರೀನಿವಾಸ್ ಹಾಗೂ ಗ್ರಾಮಸ್ಥರು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.