ಬೆಳಗಾವಿ: "ಖಾನಾಪುರ ಕಾಡಂಚಿನ 15 ಗ್ರಾಮಗಳನ್ನು ಪಟ್ಟಿ ಮಾಡಲಾಗಿದ್ದು, ಅಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಇಲ್ಲವೇ ಅಲ್ಲಿನ ಜನರನ್ನು ಬೇರೆಡೆ ಸ್ಥಳಾಂತರಿಸುವುದು. ಈ ಎರಡೇ ಅವಕಾಶಗಳು ಇರೋದು" ಎಂದು ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಸತೀಶ ಜಾರಕಿಹೊಳಿ ಹೇಳಿದರು.
ಖಾನಾಪುರ ತಾಲೂಕಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಖಾನಾಪುರ ಪ್ರವಾಸಿ ಮಂದಿರದಲ್ಲಿ ಖಾನಾಪುರ ಕಾಡಂಚಿನ ಗ್ರಾಮಸ್ಥರ ಸಮಸ್ಯೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೊಳಿ ಉತ್ತರಿಸಿದರು. "ಅರಣ್ಯ ಇಲಾಖೆಯಿಂದ ಕಾನೂನು ಸಮಸ್ಯೆಯಿದೆ. ಹೊಸ ರಸ್ತೆ ನಿರ್ಮಿಸಲು ಅವರು ಅವಕಾಶ ಕೊಡುವುದಿಲ್ಲ. ನೂರಾರು ವರ್ಷಗಳಿಂದ ಅಲ್ಲಿ ಜನರು ವಾಸವಿದ್ದಾರೆ. ಈ ಸಂಬಂಧ ಮೊನ್ನೆ ಅರಣ್ಯ ಸಚಿವರ ಜೊತೆಗೆ ಸ್ಥಳೀಯ ಶಾಸಕರೊಂದಿಗೆ ಬೆಂಗಳೂರಿನಲ್ಲಿ ಸಭೆ ಮಾಡಿದ್ದೇವೆ. ಸಚಿವರನ್ನು ಒಮ್ಮೆ ಬೆಳಗಾವಿಗೆ ಕರೆಸಿ ಚರ್ಚಿಸುತ್ತೇವೆ" ಎಂದು ಹೇಳಿದರು.
ಕಾಡಂಚಿನ ಅಮಗಾಂವ ಗ್ರಾಮದ ಮಹಿಳೆ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, "ಆ ಮಹಿಳೆಗೆ ಬ್ರೈನ್ ಸ್ಟ್ರೋಕ್ ಆಗಿತ್ತು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಕೆಎಲ್ಇ ಆಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ನೀಡಿದರೂ ಬದುಕಲಿಲ್ಲ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಲು ವಾಹನ ವ್ಯವಸ್ಥೆ ಇರಲಿಲ್ಲ. ಆಂಬ್ಯುಲೆನ್ಸ್ ಹೋಗಲು ಸರಿಯಾದ ರಸ್ತೆ ಇಲ್ಲ. ಮೊಬೈಲ್ ನೆಟ್ವರ್ಕ್ ಸಮಸ್ಯೆ ಇದೆ. ಇದು ಮೂರ್ನಾಲ್ಕು ಇಲಾಖೆಗಳಿಗೆ ಸಂಬಂಧಪಟ್ಟ ವಿಷಯವಾಗಿದೆ. ರೇಶನ್ ಪಡೆಯಲು ಕಾಡಂಚಿನ ಗ್ರಾಮಸ್ಥರು ಪರದಾಡುವ ಸಮಸ್ಯೆ ಇದೆ. ಶೇ.80ರಷ್ಟು ಜನರು ಒಪ್ಪಿದರೆ ಅವರನ್ನು ಬೇರೆಡೆ ಸ್ಥಳಾಂತರ ಮಾಡಬಹುದು" ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
"ಖಾನಾಪುರದ ಹಲವು ಹಳೆಯ ಸೇತುವೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಇನ್ನು ಖಾನಾಪುರದಿಂದ ಗೋವಾ ರಾಜ್ಯದ ಗಡಿಯವರೆಗೂ ರಾಷ್ಟ್ರೀಯ ಹೆದ್ದಾರಿ ರಸ್ತೆ ದುರಸ್ಥಿ ಮತ್ತು ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಮಳೆಗಾಲ ಮುಗಿದ ಬಳಿಕ ಹೊಸ ಸೇತುವೆ ನಿರ್ಮಿಸುತ್ತೇವೆ" ಎಂದು ಹೇಳಿದರು.
ಪ್ರವಾಹ ನಿಯಂತ್ರಣದಲ್ಲಿದೆ: "ಜಿಲ್ಲೆಯಲ್ಲಿ ಅಷ್ಟೊಂದು ಅಪಾಯಕಾರಿ ಮಟ್ಟದಲ್ಲಿ ಪ್ರವಾಹವಿಲ್ಲ. ಎಲ್ಲವೂ ನಿಯಂತ್ರಣದಲ್ಲಿದೆ. ನಿನ್ನೆ ಚಿಕ್ಕೋಡಿ ಭಾಗಕ್ಕೆ ಭೇಟಿ ನೀಡಿ ಬಂದಿದ್ದೇನೆ. ಕೊಯ್ನಾ ಜಲಾಶಯದಿಂದ ನೀರು ಬಿಡುವ ಪ್ರಮಾಣ ನೋಡುತ್ತೇವೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ" ಎಂದು ಸತೀಶ ಜಾರಕಿಹೊಳಿ ಹೇಳಿದರು.
ಧರಣಿ ನಡುವೆಯೂ ಎಲ್ಲ ಬಿಲ್ಗಳು ಪಾಸ್ ಎಂದ ಸಚಿವರು: ಸದನದಲ್ಲಿ ಬಿಜೆಪಿ ನಾಯಕರ ಅಹೋರಾತ್ರಿ ಧರಣಿ ಕುರಿತು ಮಾತನಾಡಿ, "ಧರಣಿ, ಪ್ರತಿಭಟನೆ ಮಧ್ಯೆಯೂ ಎಲ್ಲಾ ಬಿಲ್ಗಳು ಪಾಸ್ ಆಗಿವೆ. ಸದನದಲ್ಲಿ ಹಂಗೇ ಇರುತ್ತದೆ. ಚರ್ಚೆ ನಡೆಯುತ್ತದೆ, ಅದೇ ರೀತಿ ಬಿಲ್ ಕೂಡ ಪಾಸ್ ಆಗುತ್ತವೆ. ಅವರ ಪಾತ್ರ ಅವರು ಮಾಡಿದ್ದಾರೆ. ನಮ್ಮ ಪಾತ್ರ ನಾವು ಮಾಡಿದ್ದೇವೆ" ಎಂದು ಹಾಸ್ಯಚಟಾಕಿ ಹಾರಿಸಿದರು.
ಬಿಜೆಪಿಯವರ ಮುಡಾ ಪ್ರಕರಣ ವಿಚಾರವಾಗಿ ಬೆಂಗಳೂರ ಟು ಮೈಸೂರು ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ, "ಅವರು ಸ್ವತಂತ್ರರಿದ್ದಾರೆ, ಹೋಗಬಹುದು. ಹೋರಾಟ ಮಾಡಬಹುದು. ಆದರೆ ಅಂತಿಮವಾಗಿ ಕಾನೂನು ಇದೆ" ಎಂದು ಹೇಳಿದರು.
"ಮಳೆ ಜಾಸ್ತಿ ಆದ ಕಾರಣ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಹಾಳಾಗಿವೆ. ಮಳೆ ನಿಂತ ಮೇಲೆ ಪರಿಹಾರ ಕೊಡುತ್ತೇವೆ" ಎಂದ ಸತೀಶ ಜಾರಕಿಹೊಳಿ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ವಿಚಾರದ ಕುರಿತು, "ನಮ್ಮ ಇಲಾಖೆಯಲ್ಲಿ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಯಾರು ಬರುತ್ತಾರೋ ಅವರಿಗೆ ಕೊಡುತ್ತೇವೆ" ಎಂದು ಹೇಳಿದರು.
ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಜಾಂಬೋಟಿ ರಸ್ತೆಯಲ್ಲಿ ಕುಸುಮಳ್ಳಿ ಸೇತುವೆ ಪರಿಶೀಲಿಸಿದರು. ಈ ವೇಳೆ ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸೇರಿ ಮತ್ತಿತರರು ಇದ್ದರು. ಇದಾದ ಬಳಿಕ ಖಾನಾಪುರ ತಾಲ್ಲೂಕಿನ ಅಧಿಕಾರಿಗಳ ಜೊತೆಗೆ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು.