ರಾಮನಗರ: ಚನ್ನಪಟ್ಟಣ ಅಂದ್ರೆ ನನಗೆ ಕರುಳು ಬಳ್ಳಿ ಸಂಬಂಧ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದುಕೊಂಡಿದ್ದೇನೆ. ಇದೊಂದು ವಿಶೇಷ ಕ್ಷೇತ್ರ. ಇಲ್ಲಿ ಎಲ್ಲ ಜನಾಂಗದವರಿದ್ದು, ವಿಶೇಷ ಪ್ರಾಧಾನ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ಚನ್ನಪಟ್ಟಣ ಕ್ಷೇತ್ರದ ಎರಡು ಹೋಬಳಿ ಕೇಂದ್ರಗಳು ಸಾತನೂರು ವಿಧಾನಸಭಾ ಕ್ಷೇತ್ರಕ್ಕೆ ಬರುತ್ತಿತ್ತು. ಕ್ಷೇತ್ರ ವಿಗಂಡಣೆಯ ಬಳಿಕ ಈ ಕ್ಷೇತ್ರ ಬಿಡಬೇಕಾಯಿತು. ನನಗೂ ಬಹಳ ದಿನದಿಂದಲೂ ಆಸೆ ಇದ್ದು, ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತವಿದೆ ಎಂದು ತಿಳಿಸಿದರು.
ಇದೊಂದು ಜಾತ್ಯತೀತ ಕ್ಷೇತ್ರ. ಎಲ್ಲರ ಸಹಭಾಗಿತ್ವ ಎಲ್ಲಾ ಜನಾಂಗದವರಿರುವ ಕ್ಷೇತ್ರ. ಇದರಿಂದ ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಸೆ ಇದೆ. ನಾವು ತಯಾರು ಮಾಡಿದ ನಾಯಕರು ಬೆಳೆದ ನಂತರ ನಮ್ಮನ್ನು ಬಿಟ್ಟು ದೂರ ಹೋಗಿದ್ದಾರೆ ಎಂದು ಪರೋಕ್ಷವಾಗಿ ಸಿಪಿವೈ ವಿರುದ್ದ ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ಅವರೇ ತೋರಿಸಿಕೊಟ್ಟಿದ್ದಾರೆ. ಅವರ ಭಾವನನ್ನು (ಸಿ.ಎನ್.ಮಂಜುನಾಥ್) ಜೆಡಿಎಸ್ ಪಕ್ಷದಿಂದ ನಿಲ್ಲಿಸದೆ ಬಿಜೆಪಿಯಿಂದ ನಿಲ್ಲಿಸಿದ್ದಾರೆ. ಜೆಡಿಎಸ್ ಪಕ್ಷದವರಿಗೆ ಧೈರ್ಯ ಇದ್ದಿದ್ದರೆ ಈ ಕ್ಷೇತ್ರದಿಂದ ಹೆಚ್‌ಡಿಕೆ ಸ್ಪರ್ಧೆ ಮಾಡಬೇಕಿತ್ತು. ಅದನ್ನು ಬಿಟ್ಟು ಮಂಡ್ಯ ಜಿಲ್ಲೆಗೆ ಹೋಗಿ ಸ್ಪರ್ಧೆ ಮಾಡಿದ್ದಾರೆ. ಹಾಸನ, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆಂದು ಅವರು ಭವಿಷ್ಯ ನುಡಿದರು.
ಸಂವಿಧಾನ ರಕ್ಷಣೆ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ-ಖರ್ಗೆ: ನಮ್ಮ ಸಂವಿಧಾನ ರಕ್ಷಣೆ, ಪ್ರಜಾಪ್ರಭುತ್ವ ರಕ್ಷಣೆ ಆಗಬೇಕಾದ್ರೆ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಬರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಅವನತಿಗಾಗಿ ಈಗಾಗಲೇ ಮೋದಿ 400 ಸ್ಥಾನ ನೀಡಿ ಎಂದು ಕೇಳುತ್ತಿದ್ದಾರೆ. ತುಘಲಕ್ ಆಡಳಿತ ನಡೆಯಬೇಕಾದರೆ ಅತಿ ಹೆಚ್ಚಿನ ಸ್ಥಾನದ ಅವಶ್ಯಕತೆ ಇದ್ದು, ಒಂದು ವೇಳೆ ಸಂವಿಧಾನ ಬದಲಾಗಬೇಕಾದರೆ ಅರ್ಧಕ್ಕಿಂತ ಹೆಚ್ಚು ಸ್ಥಾನ ಬೇಕು. ಅದಕ್ಕಾಗಿ ಮೋದಿ 400 ಸ್ಥಾನ ಕೇಳುತ್ತಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ ಎಂದರು.
ಇದನ್ನೂಓದಿ: ಜೋಶಿ ವಿರುದ್ಧ ನನ್ನ ಧರ್ಮಯುದ್ಧ, ಜಯ ಸಿಗುವವರೆಗೂ ಮಾಲೆ ಧರಿಸಲ್ಲ: ದಿಂಗಾಲೇಶ್ವರ ಶ್ರೀ - Dingaleshwar Swamiji