ಬೆಂಗಳೂರು: ನಾನು ಬದುಕಿರುವವರೆಗೆ ಕನ್ನಡಿಗನೆ, ಆರ್.ಸಿ.ಬಿಯ ಹೆಮ್ಮೆಯ ಅಭಿಮಾನಿಯೇ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು. ಮೇಕೆದಾಟು ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಫೋಟೋಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಳದಿ ಜರ್ಸಿ ಹಾಕಿಸಿ ವ್ಯಂಗ್ಯಮಾಡಿದ ಬಿಜೆಪಿ ಟ್ವೀಟ್ಗೆ ಸಿಎಂ ತಿರುಗೇಟು ನೀಡಿದ್ದಾರೆ.
ಮೇಕೆದಾಟು ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದಾಗ ನಮ್ಮ ಮೇಲೆ ಮೊಕದ್ದಮೆ ದಾಖಲಿಸಿದವರು ನೀವೇ. ಕಾವೇರಿ ನೀರು ಹಂಚಿಕೆಯಲ್ಲಿ ನಾಡಿಗೆ ಅನ್ಯಾಯ ಆಗುತ್ತಿದ್ದಾಗ ಹಲವು ಬಾರಿ ಮನವಿ ಮಾಡಿದರೂ ಮಧ್ಯಪ್ರವೇಶಿಸದೆ ಕನ್ನಡಿಗರನ್ನು ಸಂಕಷ್ಟಕ್ಕೆ ತಳ್ಳಿದವರು ನಿಮ್ಮದೇ ಪ್ರಧಾನಿ ಎಂದು ಸಿಎಂ ಟೀಕಿಸಿದ್ದಾರೆ.
ನಿಮ್ಮದೇ ಪಕ್ಷದ ರಾಜ್ಯಾಧ್ಯಕ್ಷ ತಮಿಳುನಾಡಿನಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಾರೆ, ಮೇಕೆದಾಟು ಯೋಜನೆ ವಿರುದ್ಧ ಉಪವಾಸ ಸತ್ಯಾಗ್ರಹ ಕೂರುತ್ತಾರೆ. ಮೇಕೆದಾಟು ಯೋಜನೆಯ ಜಾರಿಗೆ ನಾವು ಎಂ.ಕೆ. ಸ್ಟಾಲಿನ್ ಅವರ ಅನುಮತಿಗಾಗಿ ಕಾದು ಕುಳಿತಿಲ್ಲ, ನಮಗೆ ಅನುಮತಿ ಬೇಕಿರುವುದು ಕೇಂದ್ರ ಸರ್ಕಾರದ್ದು. ನಿಮ್ಮದೇ ಪಕ್ಷದ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಿದರೆ ನಾಳೆಯಿಂದಲೇ ಅಣೆಕಟ್ಟು ಕೆಲಸ ಆರಂಭ ಮಾಡಲು ನಾವು ತಯಾರಿದ್ದೇವೆ. ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂಬ ಸುಳ್ಳು ಸುದ್ದಿಯ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವುದನ್ನು ನಿಲ್ಲಿಸಿ ಎಂದು ಸಿದ್ದರಾಮಯ್ಯ ಬಿಜೆಪಿಗೆ ತಿವಿದಿದ್ದಾರೆ.
ನನ್ನ ಭಾವಚಿತ್ರಕ್ಕೆ ಹಳದಿ ಬಣ್ಣದ ಜೆರ್ಸಿ ಹಾಕಿ ನನ್ನ ಬದ್ಧತೆಯನ್ನು ಅವಮಾನಿಸಬೇಡಿ. ನಾನು ಬದುಕಿರುವವರೆಗೆ ಕನ್ನಡಿಗನೆ, ಆರ್.ಸಿ.ಬಿ ಯ ಹೆಮ್ಮೆಯ ಅಭಿಮಾನಿಯೇ ಎಂದು ತಿರುಗೇಟು ನೀಡಿದರು.
ನಾನು ಮೇಕೆದಾಟು ಯೋಜನೆಗಾಗಿಯೇ ಜಲ ಸಂಪನ್ಮೂಲ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ತಮಿಳುನಾಡು ಏನಾದರೂ ಮಾಡಿಕೊಳ್ಳಲಿ. ಅವರು ಅವರ ಹೋರಾಟ ಮಾಡಲಿ. ಕಾವೇರಿ ನೀರು ನಿರ್ವಹಣಾ ಸಮಿತಿಗೆ ನೀರಿನ ಸಮಸ್ಯೆಯ ಅರಿವಿದೆ. ಅವರು ನಮಗೆ ನ್ಯಾಯ ಕೊಡಲೇಬೇಕು. ಕೋರ್ಟ್ನಲ್ಲೂ ನಮಗೆ ನ್ಯಾಯ ಸಿಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಈ ಮೊದಲು ತಿಳಿಸಿದ್ದರು.
ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟಲು ಬಿಡುವುದಿಲ್ಲ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, ಅದು ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆಯಲ್ಲ. ಅದು ಅವರ ಪಕ್ಷದ ಪ್ರಣಾಳಿಕೆಯಾಗಿದೆ. ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ. ಎರಡೂ ರಾಜ್ಯಗಳಿಗೆ ಉಪಯೋಗವಾಗುತ್ತದೆ. ಇಡೀ ದೇಶದ ಜನರು ಕರ್ನಾಟಕದಲ್ಲಿ ಇದ್ದಾರೆ. ಈ ಯೋಜನೆಯಿಂದ ಇಡೀ ದೇಶದ ಜನರಿಗೆ ಉಪಯೋಗವಾಗುತ್ತದೆ. ಮೇಕೆದಾಟು ಯೋಜನೆಯ ಪರವಾಗಿ ತಮಿಳುನಾಡು ಮಾತನಾಡುವ ಒಳ್ಳೆಯ ಕಾಲ ಬರಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ತಮಿಳುನಾಡು ಏನಾದರೂ ಮಾಡಲಿ, ನಾನು ಮೇಕೆದಾಟು ಕಟ್ಟಲೆಂದೇ ನೀರಾವರಿ ಸಚಿವನಾಗಿದ್ದೇನೆ: ಡಿಕೆಶಿ - LET TAMIL NADU DO ANYTHING