ಉಡುಪಿ: "ನಾನು ಸಂವಿಧಾನ ಬದಲಿಸಬೇಕೆಂಬ ಮಾತನ್ನು ಹೇಳಿಯೇ ಇಲ್ಲ. ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂತ ಸಮಾವೇಶ ನಡೆದಿತ್ತು. ಸಂತರು ಸೇರಿ ಲಿಖಿತ ರೂಪದ ನಿರ್ಣಯ ಕೈಗೊಂಡಿದ್ದೆವು. ರಾಜ್ಯಪಾಲರಿಗೆ ಕೊಟ್ಟ ಪ್ರತಿಯಲ್ಲಿ ಸಂವಿಧಾನದ ಕುರಿತ ಯಾವುದೇ ಮಾತಿನ ಉಲ್ಲೇಖವಿಲ್ಲ" ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ಹೇಳಿಕೆಯಿಂದ ಇಷ್ಟೆಲ್ಲಾ ಆಗಿದೆ. ನಿರಾಧಾರ ಆರೋಪ ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಅವರು ಈ ಕುರಿತು ಪರಿಶೀಲಿಸಿ ಮಾತನಾಡಬೇಕಿತ್ತು. ವಿಡಿಯೋ ಕ್ಲಿಪ್ಪಿಂಗ್ ಹಾಗೂ ಲಿಖಿತ ರೂಪದ ಪತ್ರವನ್ನು ಪರಿಶೀಲಿಸಬಹುದು" ಎಂದು ಹೇಳಿದರು.
"ಆಡದೇ ಇರುವ ಮಾತಿಗೆ ಸಮಾಜದಲ್ಲಿ ಜನ ದಂಗೆ ಎದ್ದ ರೀತಿ ವರ್ತಿಸುತ್ತಿದ್ದಾರೆ. ಸುಳ್ಳು ಆರೋಪ ಹೊರಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನನ್ನ ವಿರುದ್ಧ ಪ್ರತಿಭಟಿಸುವ ಕೆಲಸವಾಗುತ್ತಿದೆ. ನನ್ನನ್ನು ಯಾಕೆ ಟಾರ್ಗೆಟ್ ಮಾಡುತ್ತಾರೆ ಎಂದು ಅವರನ್ನೇ ಕೇಳಬೇಕು. ನನ್ನನ್ನು ಹಣಿದರೆ ಹಿಂದೂ ಸಮಾಜಕ್ಕೆ ಮುಖವಾಣಿ ಇಲ್ಲ ಎಂದು ಅಂದುಕೊಂಡಿರಬಹುದು. ವರದಿಗಾರರಿಗೆ ನಾನು ಆಡದೇ ಇರುವ ಮಾತು ಎಲ್ಲಿ ಸಿಕ್ಕಿತೋ ಗೊತ್ತಿಲ್ಲ. ಸಮಾಜ ಒಡೆಯುವ ಮತ್ತು ಕಲಹ ಸೃಷ್ಟಿಸುವ ಕೆಲಸವನ್ನು ಯಾರೂ ಮಾಡಬಾರದು" ಎಂದರು.
ಯಾವುದೇ ಸಂವಿಧಾನ ವಿರೋಧಿ ಕೃತ್ಯ ಎಸಗಿಲ್ಲ: "ನಾನು ಪ್ರತೀ ಚುನಾವಣೆಯಲ್ಲೂ ಮತದಾನ ಮಾಡುತ್ತೇನೆ. ಈವರೆಗೆ ಯಾವುದೇ ಸಂವಿಧಾನ ವಿರೋಧಿ ಕೃತ್ಯ ಮಾಡಿಲ್ಲ. ಸಮಾಜದ ಎಲ್ಲಾ ವರ್ಗದ ಜೊತೆ ಪ್ರೀತಿ, ಸಹಬಾಳ್ವೆಯಿಂದ ಇದ್ದೇನೆ. ಸಮಾಜದಲ್ಲಿ ದುರ್ಬಲರ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದೇವೆ. ದಲಿತರ ಕೇರಿಗೆ ಭೇಟಿ, ದುರ್ಬಲರಿಗೆ ಮನೆ ಕಟ್ಟಿಸಿ ಕೊಡುವ ಕೆಲಸ ಮಾಡುತ್ತಿದ್ದೇವೆ" ಎಂದು ಹೇಳಿದರು.
"ಪೇಜಾವರ ಮಠ ಮತ್ತು ಸಂಘ, ಸಂಸ್ಥೆಗಳು ದಾನಿಗಳ ಮೂಲಕ ನಿರಂತರವಾಗಿ ಸಮಾಜ ಸೇವೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ಮಾತಿನಿಂದ ಪ್ರೇರಣೆಗೊಂಡು ಅನೇಕ ಮಂದಿ ದುರ್ಬಲರಿಗೆ ಸೂರು ಕಟ್ಟಿಸಿ ಕೊಡುತ್ತಿದ್ದಾರೆ. ಇತ್ತೀಚಿಗೆ 16 ಲಕ್ಷ ರೂ. ವೆಚ್ಚದ 14 ಮನೆಗಳನ್ನು ಉದ್ಯಮಿಯೊಬ್ಬರ ಮೂಲಕ ಕೊರಗ ಜನಾಂಗದವರಿಗೆ ಕಟ್ಟಿಸಿ ಕೊಡಲಾಗಿದೆ" ಎಂದು ತಿಳಿಸಿದರು.
"ಇಸ್ಕಾನ್ ಸಂಸ್ಥೆಯ ಮುಖ್ಯಸ್ಥರನ್ನು ರಾಜದ್ರೋಹದ ಆರೋಪದಲ್ಲಿ ಬಂಧಿಸಲಾಗಿದೆ. ಅವರ ಎಲ್ಲ ಸೌಲಭ್ಯಗಳನ್ನು ನಿಷೇಧಿಸಲಾಗಿದೆ. ಇದು ಅತ್ಯಂತ ಕಠೋರವಾದ ವಿಚಾರ. ಇದನ್ನು ನಾನು ಖಂಡಿಸುತ್ತೇವೆ. ಬಹುಬೇಗ ಅವರನ್ನು ವಿಮುಕ್ತಗೊಳಿಸಬೇಕು. ಬಾಂಗ್ಲಾದೇಶಕ್ಕೆ ಅವರು ಮತ್ತು ಇಸ್ಕಾನ್ ಸಲ್ಲಿಸಿರುವ ಕೊಡುಗೆ ಅಪಾರ. ಹಸಿದವರಿಗೆ ಕಷ್ಟಕಾಲದಲ್ಲಿ ಅನ್ನ ಕೊಟ್ಟ ಸಂಸ್ಥೆ ಇಸ್ಕಾನ್. ಈ ಬಗ್ಗೆ ಬಾಂಗ್ಲಾದೇಶ ಅವರಿಗೆ ಕೃತಜ್ಞರಾಗಿರಬೇಕು. ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಶ್ರೀಗಳು ಒತ್ತಾಯಿಸಿದರು.
ಇದನ್ನೂ ಓದಿ: ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸದಿರಲು ಸಿಎಂ ಸಿದ್ದರಾಮಯ್ಯ ತೀರ್ಮಾನ