ಮೈಸೂರು: ''ನಾನು ಮತ್ತು ನನ್ನ ಪುತ್ರ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ. ಪ್ರತಾಪ್ ಸಿಂಹ ಅವರಿಗೂ ಕಾಂಗ್ರೆಸ್ಗೆ ಹೋಗದಂತೆ ಬುದ್ಧಿ ಹೇಳಿದ್ದೇನೆ'' ಎಂದು ಶಾಸಕ ಜಿ. ಟಿ. ದೇವೇಗೌಡ ತಿಳಿಸಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ಇರುವ ಜಿ.ಟಿ. ದೇವೇಗೌಡ ಕಚೇರಿಗೆ ಆಗಮಿಸಿದ ಮೈಸೂರು- ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಶಾಸಕ ಜಿ.ಟಿ. ದೇವೇಗೌಡ ಅವರನ್ನು ಭೇಟಿಯಾಗಿ ಸಹಕಾರ ಕೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಯದುವೀರ್ ಅವರು, ''ನಮ್ಮ ಪರವಾಗಿ ಚುನಾವಣಾ ಫಲಿತಾಂಶ ಬರಲು ಶಾಸಕ ಜಿ. ಟಿ. ದೇವೇಗೌಡ ಅನುಭವ ಆಗಾಧವಾಗಿದ್ದು, ಅವರ ಅನುಭವವನ್ನು ನಮಗೆ ನೀಡಬೇಕೆಂದು ಮನವಿ ಮಾಡುತ್ತೇನೆ'' ಎಂದರು.
ಶಾಸಕ ಜಿ.ಟಿ. ದೇವೇಗೌಡ ಹೇಳಿಕೆ: ಯದುವೀರ್ ಒಡೆಯರ್ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತಾನಾಡಿದ ಶಾಸಕ ಜಿ.ಟಿ. ದೇವೇಗೌಡರ, ''ಯದುವೀರ್ ಒಡೆಯರ್ ಅರಮನೆ ಒಳಗಡೆ ಇದ್ದರೂ ಸಾಮಾಜಿಕ ಕಳಕಳಿ ಇರುವ ಅಭ್ಯರ್ಥಿ. ನಾವು ಹಾಗೂ ದೇವೇಗೌಡರು, ಕುಮಾರಸ್ವಾಮಿ ಮಾತುಕತೆ ನಡೆಸಿ ಯದುವೀರ್ ಒಡೆಯರ್ ಅವರನ್ನ ಗೆಲ್ಲಿಸುವಂತೆ ಮಾತುಕತೆ ಆಗಿದ್ದು ಸೀಟ್ ಹಂಚಿಕೆಯು ಸುಸೂತ್ರವಾಗಿ ನಡೆದಿದೆ.
ರಾಜರ ಕುಡಿಯನ್ನು ಬಿಜೆಪಿ ಆಯ್ಕೆ ಮಾಡಿರುವುದು ಒಳ್ಳೆಯದು: ಮತ್ತೊಮ್ಮೆ ನರೇಂದ್ರ ಮೋದಿ ಅವರು ಬಂದರೆ ಮಾತ್ರ ಕರ್ನಾಟಕ ಉದ್ಧಾರವಾಗುತ್ತದೆ. ಜೊತೆಗೆ ಹೆಚ್ಚು ಅನುದಾನ ಬರುತ್ತದೆ. ಕಾಂಗ್ರೆಸ್ನಿಂದ ನಯಾಪೈಸೆಯೂ ಪ್ರಯೋಜನ ಇಲ್ಲ, ರಾಜ್ಯದ ಜನತೆಗೆ ಮನವಿ ಮಾಡುವುದು ಎಂದರೆ ಚಾಮುಂಡೇಶ್ವರಿ ಭಕ್ತನಾದ ಒಳ್ಳೆ ಮನಸ್ಸಿನ, ರಾಜರ ಕುಡಿಯನ್ನು ಬಿಜೆಪಿ ಆಯ್ಕೆ ಮಾಡಿರುವುದು ಒಳ್ಳೆಯದು'' ಎಂದು ತಿಳಿಸಿದರು.
''ಮೈಸೂರು- ಕೊಡಗು ಬಿಜೆಪಿ ಅಭ್ಯರ್ಥಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮತ ಭೇಟೆ ಆರಂಭಿಸಿದ್ದಾರೆ. ಅವರು ನಿನ್ನೆ ಚಹಾ ಅಂಗಡಿಯಲ್ಲಿ ಕುಳಿತು ಚಹಾ ಕುಡಿದಿದ್ದು, ಅವರು ಜನಸಾಮಾನ್ಯರ ವ್ಯಕ್ತಿಯಾಗಿದ್ದಾರೆ. ಅವರನ್ನ ಗೆಲ್ಲಿಸೋಣ'' ಎಂದರು.
ಪ್ರತಾಪ್ ಸಿಂಹಗೆ ಬುದ್ಧಿ ಹೇಳಿದ್ದೇನೆ- ಜಿ.ಟಿ. ದೇವೇಗೌಡ: ''ನಾನು ಮತ್ತು ನನ್ನ ಮಗ ಕಾಂಗ್ರೆಸ್ಗೆ ಹೋಗುವುದಿಲ್ಲ. ಪ್ರತಾಪ್ ಸಿಂಹ ಅವರಿಗೂ ಕಾಂಗ್ರೆಸ್ ಪಕ್ಷಕ್ಕೆ ಹೋಗದಂತೆ ಬುದ್ಧಿ ಹೇಳಿದ್ದೇನೆ. ಪ್ರತಾಪ್ ಸಿಂಹ ಬುದ್ಧಿವಂತರು, ನಮ್ಮೊಂದಿಗೆ ಸಹಕಾರ ನೀಡಿ, ನಿಮ್ಮ ಗೌರವ ಹೆಚ್ಚಾಗುತ್ತದೆ. ಕಳೆದ ಬಾರಿಯೂ ನಮ್ಮ ಮೈತ್ರಿ ಕಾಂಗ್ರೆಸ್ ಜೊತೆ ಇದ್ದರೂ, ನಮ್ಮ ಸಪೋರ್ಟ್ ಬಿಜೆಪಿಗೆ ಇತ್ತು. ಈ ಬಾರಿ ರಾಜವಂಶದ ಕುಡಿ ಯದುವೀರ್ ಒಡೆಯರ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಜಿ.ಟಿ. ದೇವೇಗೌಡ ಕರೆ ನೀಡಿದರು.
ಇದನ್ನೂ ಓದಿ: ರಾಜ್ಯ ಬಿಜೆಪಿಯ ಅಂಕುಡೊಂಕು ಸರಿ ಪಡಿಸಲು ನನ್ನ ಸ್ಪರ್ಧೆ: ಕೆ.ಎಸ್. ಈಶ್ವರಪ್ಪ