ಮಂಗಳೂರು: ನನಗೆ ಅಧಿಕಾರ ಸಿಗಬೇಕೆಂದು ನಾನು ಇನ್ನೊಬ್ಬರನ್ನು ಮುಗಿಸಿಲ್ಲ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನೋರ್ವ ಕಾರ್ಯಕರ್ತನಾಗಿ ಬಂದವನು. ಎಲ್ಲಾ ಅಧಿಕಾರವೂ ಮಾಜಿಯಾಗುತ್ತದೆ. ಕಾರ್ಯಕರ್ತ ಮಾಜಿಯಾಗುವುದಿಲ್ಲ. ಪಕ್ಷ ಹೇಳಿದರೆ ನಾನು ಕಚೇರಿಯಲ್ಲಿ ಕಸ ಗುಡಿಸಲು ತಯಾರಿದ್ದೇನೆ. ಮೊದಲು ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪಕ್ಷ ಹೇಳಿತ್ತು. ನಾನು ಸ್ಪರ್ಧಿಸುವುದಿಲ್ಲ ಅಂದಿದ್ದೆ. ಆ ಬಳಿಕ ಲೋಕಸಭಾ ಅಭ್ಯರ್ಥಿಯಾಗಲು ಸೂಚನೆ ನೀಡಿತ್ತು. ನಾನು ಸ್ಪರ್ಧಿಸುವುದಿಲ್ಲ ಎಂದು ಮೂರು ದಿನಗಳ ಕಾಲ ತಪ್ಪಿಸಿದ್ದೆ ಎಂದರು.
ನಾನು ಯಾವುದೇ ಅಧಿಕಾರವನ್ನು ಕೇಳಿ ಪಡೆದಿಲ್ಲ. ಯಾವ ಅಧಿಕಾರಕ್ಕೆ ಅರ್ಜಿ ಹಾಕಿಲ್ಲ. ಯಾರ ವಿರುದ್ಧವೂ ಮಾತನಾಡಿಲ್ಲ. ನನಗೆ ಅಧಿಕಾರ ಸಿಗಬೇಕೆಂದು ಇನ್ನೊಬ್ಬರನ್ನು ಮುಗಿಸಿಲ್ಲ. ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ಪಕ್ಷವೇ ಕರೆದು ನನಗೆ ಟಿಕೆಟ್ ನೀಡಿತ್ತು. ರಾಜ್ಯಾಧ್ಯಕ್ಷ ಸ್ಥಾನವನ್ನು ನಾನು ಕೇಳಿ ಪಡೆದದ್ದಲ್ಲ. ಅಮಿತ್ ಶಾ ಅವರೇ ನನಗೆ ಕರೆದು ಅವಕಾಶ ಕೊಟ್ಟಿದ್ದು. ಈಗ ಪಕ್ಷ ಕಟ್ಟುವ ಜವಾಬ್ದಾರಿ ಕೊಟ್ಟಿದೆ. ಅದನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಡೆಗಣನೆ: ಯಡಿಯೂರಪ್ಪ - ಬೊಮ್ಮಾಯಿ ಸರ್ಕಾರದಲ್ಲಿ ಅತೀ ಹೆಚ್ಚು ಅನುದಾನ ನೀಡಲಾಗಿತ್ತು. ಈಗಿನ ಸರ್ಕಾರ ಅಭಿವೃದ್ಧಿಯನ್ನು ಕಡೆಗಣಿಸಿದೆ. ಅಭಿವೃದ್ಧಿ ಅನ್ನುವುದು ಈ ಸರ್ಕಾರದಲ್ಲಿ ಕನಸಿನ ಮಾತಾಗಿದೆ ಎಂದು ವಾಗ್ದಾಳಿ ನಡೆಸಿದರು.
ದಕ್ಷಿಣ ಕನ್ನಡದ ಹಾಲಿನ ಡೈರಿಗಳು ಲಾಸ್‌ನಲ್ಲಿವೆ. ಬಿಜೆಪಿ ವಿರುದ್ಧ 40% ಭ್ರಷ್ಟಾಚಾರದ ಆರೋಪ ಮಾಡಲಾಗಿತ್ತು. ಈಗಿನ ಸರ್ಕಾರ 80% ಭ್ರಷ್ಟಾಚಾರ ಸರ್ಕಾರ. ಇದು ಕಳ್ಳರ ಸರ್ಕಾರ. ಪ್ರಜಾಪ್ರಭುತ್ವ ಸಂವಿಧಾನದ ಹೆಸರಲ್ಲಿ ಮಾತನಾಡುವ ಮುಖ್ಯಮಂತ್ರಿಗಳು ನೈತಿಕತೆಯಿಂದ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ದಸರಾದಲ್ಲಿ ತನ್ನ ಹೆಗ್ಗಳಿಕೆ, ಭ್ರಷ್ಟಾಚಾರದ ಆರೋಪ, ರಾಜಕೀಯದ ಬಗ್ಗೆ ಹೇಳಿಕೊಳ್ಳುತ್ತಾರೆ. ಸಿದ್ದರಾಮಯ್ಯ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸರ್ಕಾರದಲ್ಲಿ ಹಲ್ಲೆ, ಗಲಭೆ, ಕೋಮು ಗಲಾಟೆಗಳು ನಡೆಯುತ್ತಿವೆ. ಆದರೆ ಪಾಕಿಸ್ತಾನ ಪರ ಘೋಷಣೆ ಹಾಕಿದವರ ಬಂಧನವಾಗಿಲ್ಲ. ಹಿಂದೂ ಸಮಾಜ ಮೇಲೆ ದಾಳಿಯಾಗುವ ಕೆಲಸವಾಗುತ್ತಿದೆ. ಇದನ್ನು ಹತ್ತಿಕ್ಕುವ ಕೆಲಸಗಳು ಆಗುತ್ತಿಲ್ಲ. ಸರ್ಕಾರ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ರಾಜಕೀಯ ಪಾರ್ಟಿಯಲ್ಲಿ ಭಿನ್ನಾಭಿಪ್ರಾಯ ಸಹಜ: ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಸಹಜ. ಒಂದು ಮನೆಯಲ್ಲಿಯೇ ಭಿನ್ನಾಭಿಪ್ರಾಯ ಇರುತ್ತದೆ. ಆದ್ದರಿಂದ ರಾಜಕೀಯ ಪಕ್ಷದಲ್ಲಿರುವುದು ಸಹಜ ಎಂದರು.
ಇದನ್ನೂ ಓದಿ: 'ನನ್ನ ಪತ್ನಿ ಎಂದೂ ರಾಜಕೀಯಕ್ಕೆ ಬಂದವಳಲ್ಲ, ಅವಳನ್ನು ಸಹ ಬೀದಿಗೆ ತಂದರು': ಸಿದ್ದರಾಮಯ್ಯ ಕಿಡಿ - CM Slams BJP