ಮೈಸೂರು: ನಾನು ಮುಡಾ ಅಧ್ಯಕ್ಷನಾದ ಮೇಲೆಯೇ ಸಿದ್ದರಾಮಯ್ಯ ಅವರಿಗೆ ಈ ಸ್ಥಿತಿ ಬಂದಿದೆ ಎಂದು ಆರೋಪಿಸಿ ನನ್ನ ತೇಜೋವಧೆ ಮಾಡಬೇಡಿ. ನನ್ನ ಮನೆ ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದ್ರೋಹ ಮಾಡಿಲ್ಲ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮರಿಗೌಡ ಹೇಳಿದರು.
ಮುಡಾ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ಹಗರಣಗಳಿಗೂ ಮುಡಾದ ಹಿಂದಿನ ಆಯುಕ್ತರುಗಳೇ ಕಾರಣ. ನಾನು ಯಾರಿಗೂ ದ್ರೋಹ ಮಾಡಿಲ್ಲ. ಪಕ್ಷದ ಕೆಲವು ಮುಖಂಡರು ನಾನು ಮುಡಾದ ಅಧ್ಯಕ್ಷನಾದ ಮೇಲೆ ಸಿದ್ದರಾಮಯ್ಯಗೆ ಈ ಸ್ಥಿತಿ ಬಂತು ಎಂದು ನನ್ನ ತೇಜೋವಧೆ ಮಾಡುತ್ತಿದ್ದಾರೆ. ದಯವಿಟ್ಟು ಈ ರೀತಿ ತೇಜೋವಧೆ ಮಾಡಬೇಡಿ. ನನಗೆ ಹೈಕಮಾಂಡ್ ಸಿದ್ದರಾಮಯ್ಯ, ಸಿದ್ದರಾಮಯ್ಯ ಹೇಳಿದರೆ ಈಗಲೇ ರಾಜೀನಾಮೆ ಕೊಡುತ್ತೇನೆ. ಮುಡಾದ ಎಲ್ಲ ಹಗರಣಗಳು ಹಿಂದಿನ ಮುಡಾ ಆಯುಕ್ತ ನಟೇಶ್ ಹಾಗೂ ದಿನೇಶ್ ಕಾಲದಲ್ಲಿ ಆಗಿದೆ. ಯಾಕೆ ಅವರ ವಿರುದ್ಧ ಬಿಜೆಪಿಯವರು ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
ಮುಡಾದಲ್ಲಿ 50:50 ಅನುಪಾತದ ನಿವೇಶನ ನೀಡದಂತೆ ಶಾಸಕರಾದ ಹರೀಶ್ ಗೌಡ ಮತ್ತು ಶ್ರೀವತ್ಸ ಪತ್ರ ಕೊಟ್ಟಿದ್ದರು. ಆ ಪತ್ರದ ಆಧಾರದ ಮೇಲೆ ಆಯುಕ್ತ ದಿನೇಶ್ ಕುಮಾರ್ಗೆ 50:50 ಅನುಪಾತ ನಿವೇಶ ನೀಡದಂತೆ ಸೂಚಿಸಿದ್ದೆ. ಆದರೂ ಆಯುಕ್ತರು ಯಾರ ಮಾತನ್ನು ಕೇಳದೇ ನಿವೇಶನ ಹಂಚಿದರು ಎಂದು ದೂರಿದರು.
ನನ್ನ ತೇಜೋವಧೆ ನನ್ನ ಪಕ್ಷದವರಿಂದಲೇ ಆಗುತ್ತಿದೆ. ಮೂರು ದಿನಗಳ ಹಿಂದೆ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣಕ್ಕೆ ಬಂದಾಗ ಅವರನ್ನು ಸ್ವಾಗತಿಸಲು ಹೋದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಈ ಸ್ಥಿತಿ ಬರಲು ನೀನೇ ಕಾರಣ ಎಂದು ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿದರು.
ಇದನ್ನೂ ಓದಿ: ಸರ್ಕಾರದ ಪತನಕ್ಕೆ 1,200 ಕೋಟಿ ರೆಡಿ ಮಾಡಿರುವ ಆರೋಪದ ಬಗ್ಗೆ ಇಡಿಗೆ ದೂರು ನೀಡಲು ಚರ್ಚೆ: ಡಿಕೆಶಿ - D K Shivakumar