ಬೆಂಗಳೂರು: ಚುನಾವಣೆಯಲ್ಲಿ ನಾನು ಎರಡು ಬಾರಿ ಸೋತಿರಬಹುದು, ಆದರೆ ಎದೆ ಗುಂದಿಲ್ಲ ಮತ್ತು ಹೆದರುವ ಪ್ರಶ್ನೆಯೇ ಇಲ್ಲ. ನಾನು ದೇವೇಗೌಡರ ಕುಟುಂಬದಿಂದ ಬಂದವ. ಪಕ್ಷದ ಕಾರ್ಯಕರ್ತರು ಅಂದ್ರೆ ನಮ್ಮ ಕುಟುಂಬ. ಮುಚ್ಚುಮರೆ ರಾಜಕೀಯವನ್ನು ನಾವು ಮಾಡಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಕರೆದಿದ್ದ ಚನ್ನಪಟ್ಟಣ ಕ್ಷೇತ್ರದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶಿಗ್ಗಾಂವಿ ಮತ್ತು ಸಂಡೂರು ಟಿಕೆಟ್ ಘೋಷಣೆ ಆಗಿದೆ. ಆದರೆ, ಚನ್ನಪಟ್ಟಣ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಕೊನೆ ಹಂತದಲ್ಲಿ ಏನು ಆಗುತ್ತದೋ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಕುಮಾರಸ್ವಾಮಿ ದೆಹಲಿಗೆ ಹೋಗಬೇಕಾದ ಒತ್ತಡವಿದ್ದರೂ ಕೂಡ ಇವತ್ತು ಕೆಲವು ನಿರ್ಧಾರಕ್ಕಾಗಿ ಇಲ್ಲೇ ಇದ್ದಾರೆ. ಕುಮಾರಸ್ವಾಮಿಯವರು ಹಿಂದೆಂದೂ ಈ ರೀತಿ ಗೊಂದಲಕ್ಕೆ ಸಿಲುಕಿಲ್ಲ ಅನಿಸುತ್ತದೆ ಎಂದು ಹೇಳಿದರು.
ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಹಾಗೂ ರಾಮನಗರ ಜಿಲ್ಲೆಯ ಜನರ ನಂಟು ಕೇವಲ ರಾಜಕೀಯ ನಂಟು ಅಲ್ಲ. 30-40 ವರ್ಷದಿಂದ ರಾಮನಗರದ ಜೊತೆ ನಂಟಿದೆ. ಚನ್ನಪಟ್ಟಣ ತಾಲೂಕಿನಲ್ಲಿ ನಮ್ಮದೇ ಆದ ಮತಗಳಿವೆ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಲ್ಲಿ ರಾಜಕೀಯ ಅಸ್ತಿತ್ವ ಕಂಡಿದ್ದಾರೆ. ತೀರ್ಮಾನ ಏನೇ ಆಗಬಹುದು. ಬಿಜೆಪಿ ರಾಷ್ಟ್ರೀಯ ಮಟ್ಟದ ನಾಯಕರು ದೂರವಾಣಿ ಮೂಲಕ ಕುಮಾರಸ್ವಾಮಿ ಅವರ ಜೊತೆ ಮಾತನಾಡಿ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರು ಗೌರವದಿಂದ ಕುಮಾರಸ್ವಾಮಿ ಅವರನ್ನು ನಡೆಸಿಕೊಂಡಿದ್ದಾರೆ. ರಾಷ್ಟ್ರೀಯ ನಾಯಕರಿಗೆ ನಮ್ಮಿಂದ ಸಣ್ಣ ತಪ್ಪು ಕೂಡ ಆಗಬಾರದು ಎಂದರು.
ರಾಜಕೀಯ ಷಡ್ಯಂತ್ರದಿಂದ ನಾನು ಸೋತೆ: ಮಂಡ್ಯದಲ್ಲಿ ಸ್ಪರ್ಧಿಸಲು ನನಗೆ ಮೊದಲು ಅವಕಾಶ ಕೊಟ್ಟರು. ಆ ಚುನಾವಣೆ ಯಾವ ರೀತಿ ನಡೆದಿದೆ ಅಂತ ಇಡೀ ರಾಜ್ಯದ ಜನತೆಗೆ ಗೊತ್ತು. ರಾಜಕೀಯ ಷಡ್ಯಂತ್ರ ಅಲ್ಲಿಗೆ ಮುಗಿಯಲಿಲ್ಲ. ರಾಮನಗರದಲ್ಲಿ ಕಾರ್ಯಕರ್ತರ ಒತ್ತಡದಿಂದ ನಾನು ಸ್ಪರ್ಧೆ ಮಾಡಿದೆ. ಅಲ್ಲೂ ಕಾಣದ ರಾಜಕೀಯ ಕೈವಾಡ ನಡೆಯಿತು. ಮೈತ್ರಿಗೆ ಎಲ್ಲೂ ಸಮಸ್ಯೆ ಆಗಬಾರದು. ಮುಂದೆ ಕಾಲವೇ ಉತ್ತರ ಕೊಡುತ್ತದೆ. ಚರ್ಚೆ ಕೂಡ ಆಗುತ್ತದೆ ಎಂದು ಹೇಳಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಒಂದು ತಿಂಗಳಿನಿಂದ ಸಂಚಾರ ಮಾಡುತ್ತಿದ್ದೇನೆ. ಚನ್ನಪಟ್ಟಣ ವಿಚಾರದಲ್ಲಿ ನಾವು ಯಾವತ್ತಾದರೂ ಜೆಡಿಎಸ್ ನಿರ್ಧಾರ ಮಾಡುತ್ತೆ ಅಂತ ಹೇಳಿದ್ದೀವಾ?, ನಾನು ಚುನಾವಣೆಗೆ ನಿಲ್ಲುತ್ತೇನೆ ಅಂತ ಎಲ್ಲಾದ್ರೂ ಹೇಳಿದ್ದೀನಾ?. ಒಬ್ಬ ವ್ಯಕ್ತಿಯಿಂದ ಮೈತ್ರಿಗೆ ಕಪ್ಪು ಚುಕ್ಕೆ ತರುವ ಕೆಲಸ ಆಗಬಾರದು ಎಂದು ನಿಖಿಲ್ ತಿಳಿಸಿದರು.
ನಿಖಿಲ್ ಸ್ಪರ್ಧೆಗೆ ಕಾರ್ಯಕರ್ತರ ಒತ್ತಡ: ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಬೇಕು. ಅವರ ಹೆಸರು ಘೋಷಣೆ ಮಾಡುವಂತೆ ಸಭೆಯಲ್ಲಿ ಒತ್ತಾಯಿಸಿದ ಪ್ರಸಂಗ ನಡೆಯಿತು. ನಿಖಿಲ್ ಕುಮಾರಸ್ವಾಮಿ ಭಾಷಣ ಮಾಡುತ್ತಿದ್ದ ವೇಳೆ, ಏನೂ ಮಾತನಾಡುವುದಿಲ್ಲ. ಕ್ಷೇತ್ರ ಉಳಿಯಬೇಕು, ಕ್ಷೇತ್ರವನ್ನು ಉಳಿಸಿಕೊಳ್ಳಬೇಕು. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲಿ, ನಾವು ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ನಿಖಿಲ್ ಅಥವಾ ಅನಿತಾ ಕುಮಾರಸ್ವಾಮಿ ಯಾರನ್ನೇ ಆದರೂ ಸರಿ, ಅಭ್ಯರ್ಥಿ ಮಾಡಿ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ದಳಪತಿಗಳಿಗೆ ಒತ್ತಾಯ ಮಾಡಿದರು.
ಜ್ವರದಿಂದ ಬಳಲುತ್ತಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೆಳಗ್ಗೆ ಆಸ್ಪತ್ರೆಗೆ ಹೋಗಿ ವೈದ್ಯರಿಂದ ತಪಾಸಣೆಗೆ ಒಳಪಟ್ಟು ನಂತರ ಡ್ರಿಪ್ಸ್ ಹಾಕಿಸಿಕೊಂಡು ನೇರವಾಗಿ ಜೆಡಿಎಸ್ ಕಚೇರಿಗೆ ಬಂದಿದ್ದರು.
ಇದನ್ನೂ ಓದಿ: ಚುನಾವಣೆ ಮಾಡಲು ಹೆದರಲ್ಲ, ಹಿಂಜರಿಯಲ್ಲ: ಕಾರ್ಯಕರ್ತರ ಭಾವನೆಯೇ ಅಂತಿಮ - ಹೆಚ್.ಡಿ.ಕುಮಾರಸ್ವಾಮಿ